ಕದನ ವಿರಾಮ ಉಲ್ಲಂಘನೆ; ‘ಫ..’ 4 ಪದದ ಆಕ್ಷೇಪಾರ್ಹ ಪದ ಬಳಸಿ ಇಸ್ರೇಲ್‌-ಇರಾನ್‌ಗೆ ಟ್ರಂಪ್‌ ತರಾಟೆ

ಟೆಲ್‌ ಅವೀವ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ವಾರ್ನಿಂಗ್‌ಗೂ ಡೋಂಟ್‌ ಕೇರ್‌ ಎನ್ನದೇ ಇಸ್ರೇಲ್‌ ಮತ್ತು ಇರಾನ್‌ ಕದನ ವಿರಾಮ ಉಲ್ಲಂಘಿಸಿವೆ. ‘ಅವರು ಫ.. ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿಯುತ್ತಿಲ್ಲ’ ಎಂದು ನಾಲ್ಕು ಪದದ ಆಕ್ಷೇಪಾರ್ಹ ಶಬ್ದವನ್ನು ಬಳಸಿ ಟ್ರಂಪ್‌ ಅಸಮಾಧಾನ ಹೊರಹಾಕಿದ್ದಾರೆ.

ಇಸ್ರೇಲ್‌ ಮತ್ತು ಇರಾನ್‌ (Israel-Iran) ಎರಡೂ ದೇಶಗಳು ಕದನ ವಿರಾಮ ಉಲ್ಲಂಘಿಸಿವೆ. ಇಸ್ರೇಲ್‌ ಬಗ್ಗೆ ನನಗೆ ನಿಜವಾಗಿಯೂ ಅತೃಪ್ತ ಭಾವನೆ ಉಂಟಾಗಿದೆ ಎಂದು ಟ್ರಂಪ್‌ ಕೆಂಡಕಾರಿದ್ದಾರೆ. ದಾಳಿಯನ್ನು ತಕ್ಷಣವೇ ನಿಲ್ಲಿಸಿ, ನಿಮ್ಮ ಪೈಲಟ್‌ಗಳನ್ನು ವಾಪಸ್‌ ಕರೆಸಿಕೊಳ್ಳಿ ಎಂದು ಇಸ್ರೇಲ್‌ಗೆ ಟ್ರಂಪ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ 4 ದೇಶಗಳ ಮಾತುಕತೆ – ಇಸ್ರೇಲ್‌, ಇರಾನ್‌ ಮಧ್ಯೆ ಕದನ ವಿರಾಮ ಆಗಿದ್ದು ಹೇಗೆ?

ಅಮೆರಿಕ ಮತ್ತು ಕತಾರ್‌ ಮಧ್ಯಸ್ಥಿಕೆಯಲ್ಲಿ ಮಾಡಿಕೊಂಡ ಒಪ್ಪಂದವನ್ನು ಇರಾನ್‌ ಉಲ್ಲಂಘಿಸಿದೆ. ಹೀಗಾಗಿ, ಟೆಹ್ರಾನ್‌ ಮೇಲೆ ತೀವ್ರ ದಾಳಿ ನಡೆಸಲು ಆದೇಶಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸ್ಪಷ್ಟಪಡಿಸಿದ್ದಾರೆ.

ಆದರೆ, ಈ ಆರೋಪಗಳನ್ನು ಇರಾನ್‌ ನಿರಾಕರಿಸಿದೆ. ಇಸ್ರೇಲ್‌ನ ಯಾವುದೇ ಉಲ್ಲಂಘನೆಗಳಿಗೆ ನಿರ್ಣಾಯಕವಾಗಿ ಪ್ರತ್ಯುತ್ತರ ನೀಡಲು ನಮ್ಮ ಪಡೆಗಳು ಸಿದ್ಧವಾಗಿವೆ ಎಂದು ಇರಾನ್‌ನ ಉನ್ನತ ಭದ್ರತಾ ಸಂಸ್ಥೆ ಎಚ್ಚರಿಸಿದೆ. ಇದನ್ನೂ ಓದಿ: 12 ದಿನಗಳ ಇಸ್ರೇಲ್-ಇರಾನ್ ಸಂಘರ್ಷಕ್ಕೆ ಅಂತ್ಯ – ಮೂರು ದೇಶಗಳಿಗೆ ಸಿಕ್ಕಿದ್ದೇನು?

ತನ್ನ ಪರಮಾಣು ನೆಲೆಗಳ ಮೇಲಿನ ದಾಳಿಗೆ ಪ್ರತೀಕಾರವಾಗಿ, ಇರಾನ್ ಸೋಮವಾರ ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಜೂನ್ 13 ರಂದು ಇಸ್ರೇಲ್ ದಾಳಿ ಪ್ರಾರಂಭಿಸಿತು. ಪರಿಣಾಮವಾಗಿ, 13 ಮಕ್ಕಳು ಸೇರಿದಂತೆ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕನಿಷ್ಠ 3,056 ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಹೇಳಿದೆ. ಇತ್ತ ಇರಾನ್‌ ದಾಳಿಗೆ ಇಸ್ರೇಲ್‌ನಲ್ಲಿ ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ.