ದೀಪಾವಳಿಯ ಶುಭಾಶಯ ಕೋರಿ, ಇದು ಧಾರ್ಮಿಕ ಸ್ವಾತಂತ್ರ್ಯದ ಸಂಕೇತವೆಂದ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಡೀ ವಿಶ್ವಕ್ಕೆ ದೀಪಗಳ ಹಬ್ಬವಾಗಿರುವ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಬೆಳಕಿನ ಹಬ್ಬವನ್ನು ಅಮೆರಿಕದಲ್ಲಿ ಆಚರಿಸುತ್ತಿರುವುದು ಧಾರ್ಮಿಕ ಸ್ವಾತಂತ್ರ್ಯದ ಸಂಕೇತವೆಂದು ಸಾರಿದ್ದಾರೆ.

ಶುಕ್ರವಾರ ಒವಲ್ ಕಚೇರಿಯಲ್ಲಿ ಭಾರತೀಯ ಅಮೆರಿಕನ್ನರೊಂದಿಗೆ ಟ್ರಂಪ್ ದೀಪಾವಳಿ ಆಚರಿಸಿ ಸಂಭ್ರಮಿಸಿದರು. ಈ ವೇಳೆ ವಿಶ್ವದೆಲ್ಲೆಡೆ ಇರುವ ಹಿಂದೂ, ಜೈನ, ಸಿಖ್ ಮತ್ತು ಬೌದ್ಧ ಧರ್ಮೀಯರಿಗೆ ಟ್ರಂಪ್ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಪತ್ರಕರ್ತರಿಗೆ ಅವಕಾಶವಿರಲಿಲ್ಲ. ಹೀಗಾಗಿ ದೀಪಾವಳಿ ಹಬ್ಬದ ಆಚರಣೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಧ್ಯಕ್ಷ, ಅಮೆರಿಕದಾದ್ಯಂತ ದೀಪಾವಳಿಯ ಆಚರಣೆಯು ನಮ್ಮ ರಾಷ್ಟ್ರದ ಒಂದು ಪ್ರಮುಖ ಸಿದ್ಧಾಂತವಾದ ಧಾರ್ಮಿಕ ಸ್ವಾತಂತ್ರ್ಯದ ಮಹತ್ವದ ಸಂಕೇತ ಸಾರುತ್ತದೆ ಎಂದು ಹೇಳಿದರು.

ಹೀಗಾಗಿ ಪ್ರತಿಯೊಬ್ಬರೂ ತಮ್ಮ ನಂಬಿಕೆ ಮತ್ತು ಆತ್ಮಸಾಕ್ಷಿಗೆ ತಕ್ಕಂತೆ ಹಬ್ಬಗಳನ್ನು ಆಚರಿಸಿ ಸಂಭ್ರಮಿಸಲು ನನ್ನ ಸಹಮತವಿದೆ ಎಂದರು. ಅಮೆರಿಕ ಮತ್ತು ಪ್ರಪಂಚದಾದ್ಯಂತ ಇರುವ ಅನೇಕ ಹಿಂದೂಗಳು, ಜೈನರು, ಸಿಖ್ಖರು ಮತ್ತು ಬೌದ್ಧರಿಗೆ ದೀಪಾವಳಿ ಶುಭಾಶಯಗಳು. ದೀಪಾವಳಿ ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟತನದ ವಿರುದ್ಧ ಒಳ್ಳೆತನದ ಜಯ ಹಾಗೂ ಅಜ್ಞಾನದ ಮೇಲಿನ ಜ್ಞಾನವನ್ನು ಸ್ಮರಿಸುವ ಒಂದು ಅವಕಾಶ ಎಂದು ಟ್ರಂಪ್ ತಿಳಿಸಿದರು.

ಕಳೆದ ವರ್ಷ, ಅಮೆರಿಕದ ಆಗಿನ ಭಾರತೀಯ ರಾಯಭಾರಿ ನವತೇಜ್ ಸರ್ನಾ ಅವರನ್ನು ಶ್ವೇತಭವನದಲ್ಲಿ ದೀಪಾವಳಿ ಹಬ್ಬದ ಆಚರಣೆಗಳಿಗೆ ಆಹ್ವಾನಿಸಲಾಗಿತ್ತು. ಆದರೆ ಈ ಹಬ್ಬದ ಶುಭಾಶಯ ಕೋರುವ ಟ್ವೀಟ್‍ನಲ್ಲಿ ಹಿಂದೂಗಳನ್ನು ಉಲ್ಲೇಖಿಸಲು ಮರೆತ ಟ್ರಂಪ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿತ್ತು. ಟ್ವಿಟ್‍ನಲ್ಲಿ ಟ್ರಂಪ್ ದೀಪಾವಳಿಯನ್ನು ಅಮೆರಿಕ ಮತ್ತು ವಿಶ್ವದಾದ್ಯಂತ ಬೌದ್ಧರು, ಸಿಖ್ಖರು ಮತ್ತು ಜೈನರು ಆಚರಿಸಿದ ರಜಾದಿನ ಎಂದು ಟ್ರಂಪ್ ಬಣ್ಣಿಸಿದ್ದರು.

Comments

Leave a Reply

Your email address will not be published. Required fields are marked *