ಮುನೀರ್‌ಗೆ ಟ್ರಂಪ್‌ ಡಿನ್ನರ್‌ – ಪಾಕ್‌ ನೆಲದಿಂದ ಅಮೆರಿಕ ಇರಾನ್‌ ಮೇಲೆ ದಾಳಿ ಮಾಡುತ್ತಾ?

ವಾಷಿಂಗ್ಟನ್‌: ಇಸ್ರೇಲ್‌-ಇರಾನ್‌ (Israel- Iran) ಮಧ್ಯೆ ನಡೆಯುತ್ತಿರುವ ಸಂಘರ್ಷದಲ್ಲಿ ಪಾಕಿಸ್ತಾನ (Pakistan) ಅಮೆರಿಕಕ್ಕೆ (USA) ಸಹಕಾರ ನೀಡುವ ಸಾಧ್ಯತೆಯಿದೆ.

ಇಸ್ರೇಲ್‌- ಇರಾನ್‌ ನಡುವಿನ ಯುದ್ಧಕ್ಕೆ ಅಮೆರಿಕ ಈಗಾಗಲೇ ಅಧಿಕೃತವಾಗಿ ಎಂಟ್ರಿಯಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿಯನ್ನು (Iran’s Supreme Leader Ali Khamenei) ಎಲ್ಲಿ ಅಡಗಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಸದ್ಯಕ್ಕೆ ನಾವು ಹತ್ಯೆ ಮಾಡುವುದಿಲ್ಲ. ಬದಲಾಗಿ ಖಮೇನಿ ಶರಣಾಗಬೇಕು ಎಂದು ಡೊನಾಲ್ಡ್‌ ಟ್ರಂಪ್‌ (Donald Trump) ಧಮ್ಕಿ ಹಾಕಿದ್ದರು.

ಟ್ರಂಪ್‌ ಇರಾನ್‌ಗೆ ಧಮ್ಕಿ ಹಾಕುವ ಸಮಯದಲ್ಲೇ ಪಾಕಿಸ್ತಾನ ಸೇನಾ ಮುಖ್ಯಸ್ಥ, ಫೀಲ್ಡ್‌ ಮಾರ್ಷಲ್‌ ಅಸಿಮ್‌ ಮುನೀರ್‌ (Asim Munir) ಅಮೆರಿಕದಲ್ಲೇ ಇದ್ದರು. ಅಮೆರಿಕ ಮತ್ತು ಪಾಕಿಸ್ತಾನ ಈಗ ಬಹಳ ಹತ್ತಿರವಾಗುತ್ತಿದ್ದು ಟ್ರಂಪ್‌ ಅವರು ತನ್ನ ಅಧಿಕೃತ ನಿವಾಸ ಶ್ವೇತ ಭವನದಲ್ಲಿ ಮುನಿರ್‌ಗೆ ಔತಣ ಸಹ ಆಯೋಜಿಸಿದ್ದರು. ಇದನ್ನೂ ಓದಿ: ಇರಾನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆ – ದೆಹಲಿಗೆ ಬಂದ ನಂತ್ರ ಕಳಪೆ ಬಸ್ಸು ನೀಡಿದ್ದಕ್ಕೆ ಆಕ್ರೋಶ

 

ಇರಾನ್‌ ಜೊತೆಗಿನ ಕಾದಾಟದ ಸಮಯದಲ್ಲೇ ಇಬ್ಬರು ಮಾತುಕತೆ ನಡೆಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಒಂದು ವೇಳೆ ಅಮೆರಿಕ ನೇರವಾಗಿ ಯುದ್ಧದಲ್ಲಿ ತೊಡಗಿದರೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕನ್‌ ನೆಲೆಗಳ ಮೇಲೆ ಇರಾನ್‌ ದಾಳಿ ನಡೆಸುವ ಸಾಧ್ಯತೆಯಿದೆ.

ಒಂದು ವೇಳೆ ಇರಾನ್‌ ತನ್ನ ನೆಲೆಗಳ ಮೇಲೆ ದಾಳಿ ನಡೆಸಿದರೆ ಅಮೆರಿಕಕ್ಕೆ ಕಷ್ಟವಾಗಲಿದೆ. ಈ ಕಷ್ಟದ ಸಮಯದಲ್ಲಿ ಅಮೆರಿಕ ಪಾಕಿಸ್ತಾನ ಸಹಕಾರ ಪಡೆದು ಇರಾನ್‌ ಮೇಲೆ ದಾಳಿ ನಡೆಸಬಹುದು ಎಂಬ ಮಾತುಗಳು ಈಗ ಕೇಳಿಬಂದಿವೆ. ಇದನ್ನೂ ಓದಿ: ‌ಇರಾನ್‌ನಿಂದ ಖಂಡಾಂತರ ಕ್ಷಿಪಣಿ ದಾಳಿ – ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಉಡೀಸ್‌

ಪಾಕಿಸ್ತಾನ ಇರಾನ್‌ ಜೊತೆ ಗಡಿಯನ್ನು ಹಂಚಿಕೊಂಡಿದೆ. ಗಡಿಯನ್ನು ಹಂಚಿಕೊಂಡಿದ್ದರೂ ಮತ್ತು ಎರಡೂ ಮುಸ್ಲಿಮ್‌ ದೇಶಗಳಾಗಿದ್ದರೂ ಪಾಕ್‌ ಮತ್ತು ಇರಾನ್‌ ನಡುವಿನ ಸಂಬಂಧ ಅಷ್ಟಕಷ್ಟೇ. ಈ ಹಿಂದೆ ಹಲವು ಬಾರಿ ಈ ದೇಶಗಳು ಪರಸ್ಪರ ಕಿತ್ತಾಟ ನಡೆಸಿವೆ. ಈ ಕಿತ್ತಾಟದ ಲಾಭವನ್ನು ಪಡೆದು ಅಮೆರಿಕ ಪಾಕ್‌ ಸಹಾಯದಿಂದ ಇರಾನ್‌ ಮೇಲೆ ಮುಂದಿನ ದಿನಗಳಲ್ಲಿ ದಾಳಿ ಮಾಡಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

 

ಪಾಕಿಸ್ತಾನ ಈಗಾಗಲೇ ದಿವಾಳಿಯಗಿದ್ದು ವಿಶ್ವ ಬ್ಯಾಂಕ್‌ ನೀಡುತ್ತಿರುವ ಸಾಲದಿಂದ ಉಸಿರಾಡುತ್ತಿದೆ. ಉದ್ಯಮಿಯಾಗಿರುವ ಟ್ರಂಪ್‌ ಮುನಿರ್‌ಗೆ ಹಲವಾರು ಆಫರ್‌ ನೀಡಿರುವ ಸಾಧ್ಯತೆಯಿದೆ. ಟ್ರಂಪ್‌ ಆಫರ್‌ ಮುನೀರ್‌ ಒಪ್ಪಿದರೆ ಇರಾನ್‌ ಮೇಲೆ ಪಾಕ್‌ ನೆಲದಿಂದ ದಾಳಿ ನಡೆಸಲು ಅಮೆರಿಕಕ್ಕೆ ಸಹಾಯವಾಗಲಿದೆ.

ಅಮೆರಿಕಕ್ಕೆ ಸಹಕಾರ ನೀಡಿತ್ತು ಪಾಕ್‌
ಪಾಕ್‌ ಭೂಮಿಯನ್ನು ಬಳಸಿ ಅಮೆರಿಕ ತನ್ನ ಕೆಲಸ ಮಾಡಿಸುವುದು ಹೊಸದೆನಲ್ಲ. ಎರಡನೇ ವಿಶ್ವಯುದ್ಧದ ಬಳಿಕ ಅಫ್ಘಾನಿಸ್ತಾನ (Afghanistan) ಸೋವಿಯತ್‌ ಯೂನಿಯನ್‌ ಜೊತೆ ಉತ್ತಮ ಸಂಬಂಧ ಹೊಂದಿತ್ತು. ಸೋವಿಯತ್‌ ಯೂನಿಯನ್‌ (Soviet Union) ಆರ್ಥಿಕ, ಮಿಲಿಟರಿ, ಸಹಕಾರವನ್ನು ನೀಡಿತ್ತು. ಶೀತಲ ಸಮರದ ಸಮಯದಲ್ಲಿ ಅಫ್ಘಾನ್‌- ಯುಎಸ್‌ಎಸ್‌ಆರ್‌ ಸಂಬಂಧ ಉತ್ತಮವಾಗುತ್ತಿರುವುದನ್ನು ಸಹಿಸದ ಅಮೆರಿಕ (America) ಪಾಕಿಸ್ತಾದಲ್ಲಿ ಮುಜಾಹಿದ್ದೀನ್‌ಗಳ ಕೈಗೆ ಶಸ್ತ್ರಾಸ್ತ್ರ ನೀಡಿ ಬೆಳೆಸತೊಡಗಿತು. ಅಮೆರಿಕದ ಈ ತಂತ್ರಕ್ಕೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಾಥ್‌ ನೀಡಿತ್ತು.

ಈ ನಿರ್ಧಾರದಿಂದ ಅಮೆರಿಕಕ್ಕೆ ಎರಡು ಲಾಭವಿತ್ತು. ಒಂದನೇಯದಾಗಿ ಅಮೆರಿಕದ ಸೈನಿಕರು ಅಫ್ಘಾನಿಸ್ತಾನಕ್ಕೆ ಹೋಗಿ ನೇರವಾಗಿ ಯುದ್ಧ ಮಾಡದ ಕಾರಣ ಸೈನಿಕರ ಸಾವು, ನೋವು ಸಂಭವಿಸುತ್ತಿರಲಿಲ್ಲ. ಎರಡನೇಯದಾಗಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪವೂ ಬರುವುದಿಲ್ಲ. ಅಮೆರಿಕ ಕೃಪಾಪೋಷಿತ ಉಗ್ರರು ಸೋವಿಯತ್‌ ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದರು. ಗೆರಿಲ್ಲಾ ಯುದ್ಧಗಳನ್ನು ಮಾಡಲು ಆರಂಭಿಸಿದರು. ಕೊನೆಗೆ 1989 ರಲ್ಲಿ ಸೋವಿಯತ್‌ ಯೂನಿಯನ್‌ ಅಫ್ಘಾನಿಸ್ತಾನದಲ್ಲಿದ್ದ ಎಲ್ಲ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತು. 1991ರಲ್ಲಿ ಯುಎಸ್‌ಎಸ್‌ಆರ್‌ ಛಿದ್ರಗೊಳ್ಳುವ ಮೂಲಕ ಅಮೆರಿಕದ ತಂತ್ರ ಯಶಸ್ವಿಯಾಗಿತ್ತು.

ವಿಶ್ವ ವಾಣಿಜ್ಯ ಅವಳಿ ಕಟ್ಟಡದ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ ಬಳಿಕ ಅಮೆರಿಕ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿತ್ತು. ಅಫ್ಘಾನಿಸ್ತಾನ ಭೂಮಿಯಿಂದ ಅವೃತವಾದ ದೇಶಗಿದ್ದ ಕಾರಣ ಸುಲಭವಾಗಿ ನುಗ್ಗಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಅಮೆರಿಕ ಪಾಕಿಸ್ತಾನದ ಮೂಲಕ ತನ್ನ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿತ್ತು. ಅಮೆರಿಕದ ಹಡಗುಗಳು ಕರಾಚಿ ಬಂದರಿಗೆ ಬಂದು ಅಲ್ಲಿಂದ ನೆಲ ಮಾರ್ಗದ ಮೂಲಕ ಶಸ್ತ್ರಾಸ್ತ್ರಗಳನ್ನು ಅಫ್ಘಾನಿಸ್ತಾನದಲ್ಲಿರುವ ಮಿಲಿಟರಿ ಕ್ಯಾಂಪ್‌ಗಳಿಗೆ ಸಾಗಿಸುತ್ತಿತ್ತು. ನೇರವಾವಿ ಪಾಕ್‌ ಅ‍ಫ್ಘಾನ್‌ ಯುದ್ಧದಲ್ಲಿ ಭಾಗಿಯಾಗದೇ ಇದ್ದರೂ ಅಮೆರಿಕಕ್ಕೆ ಸಹಕಾರ ನೀಡುವ ಮೂಲಕ ಪರೋಕ್ಷವಾಗಿ ಭಾಗಿಯಾಗಿತ್ತು. ಪಾಕ್‌ ಸಹಕಾರಕ್ಕೆ ಅಮೆರಿಕ ಎಫ್‌ 16 ಯುದ್ಧ ವಿಮಾನ ಸೇರಿದಂತೆ  ಹಲವಾರು ಶಸ್ತ್ರಾಸ್ತ್ರಗಳನ್ನು ನೀಡಿತ್ತು.