ಕಾಡಂಚಿನ ಪ್ರದೇಶದ ನಾಯಿಗಳ ಹೊಣೆ ಅರಣ್ಯ ಇಲಾಖೆಗೆ

ಚಾಮರಾಜನಗರ: ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಗ್ರಾಮಗಳ ಬೀದಿನಾಯಿಗಳ ಆರೋಗ್ಯ ಹೊಣೆಯನ್ನು ಅರಣ್ಯ ಇಲಾಖೆಯೇ ಹೊರಲಾರಂಭಿಸಿದೆ.

ವನ್ಯಜೀವಿಗಳಿಗೆ ಬೀದಿನಾಯಿಗಳಿಂದ ರೋಗ ಹರಡಬಾರದೆಂಬ ಉದ್ದೇಶದಿಂದ ಅರಣ್ಯ ಇಲಾಖೆ ಬೀದಿನಾಯಿಗಳ ಆರೋಗ್ಯದ ಮೇಲೂ ಕಾಳಜಿ ವಹಿಸುತ್ತಿದ್ದು, ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಈ ಮೂಲಕ ತಾಲೂಕು ಆಡಳಿತ ನಿರ್ವಹಿಸಬೇಕಿದ್ದ ಜವಾಬ್ದಾರಿಯನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿರುವುದು ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಕಾಳಜಿ ತೋರಿದ ಇಲಾಖೆ
ಅರಣ್ಯ ಇಲಾಖೆ ವನ್ಯಜೀವಿಗಳ ಮೇಲಿನ ಕಾಳಜಿ ಮತ್ತು ಆರೋಗ್ಯಕರ ಪರಿಸರ ಕಾಪಾಡಿಕೊಳ್ಳಲು ಇದೀಗ ಬೀದಿನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡುತ್ತಿದೆ. ಈ ಹಿಂದೆ ಜಾನುವಾರುಗಳನ್ನು ಅರಣ್ಯದೊಳಗೆ ಬಿಡುವುದನ್ನು ನಿಯಂತ್ರಿಸಿದರ ಪರಿಣಾಮ ಕಾಲುಬಾಯಿ ಜ್ವರ, ಅಂಥ್ರಾಕ್ಸ್ ಮುಂತಾದ ರೋಗಗಳು ನಿಯಂತ್ರಣಗೊಂಡಿತ್ತು.

ಇತ್ತೀಚಿನ ದಿನಗಳಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ರೇಬಿಸ್ ಹಾಗೂ ಇತರ ರೋಗ ಪೀಡಿತ ಬೀದಿನಾಯಿಗಳನ್ನು ಚಿರತೆ ಹಾಗೂ ಹುಲಿಗಳು ಬೇಟೆಯಾಡಿ ತಿನ್ನುವ ಸಂಭವಿರುವುದರಿಂದ ವ್ಯಾಘ್ರಗಳಿಗೂ ರೋಗ ಹರಡಬಹುದೆಂದು ಊಹಿಸಿ ಅರಣ್ಯ ಇಲಾಖೆ ಬೀದಿನಾಯಿಗಳ ಆರೈಕೆಯಲ್ಲಿ ತೊಡಗಿದೆ. ಇಷ್ಟೇ ಅಲ್ಲದೆ ಬೀದಿ ನಾಯಿಗಳ ಸಂತಾನ ನಿಯಂತ್ರಿಸುವ ಸಲುವಾಗಿ ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಲಾಗಿದೆ.

ಎಲ್ಲೆಲ್ಲಿ ಕಾರ್ಯಾಚರಣೆ?
ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಗ್ರಾಮಗಳಾದ ಜಕ್ಕಹಳ್ಳಿ, ಮಂಗಲ, ಚಿಕ್ಕಯಲಚೆಟ್ಟಿ, ಲೊಕ್ಕೆರೆ, ಆಡಿನಕಣಿವೆ ಮುಂತಾದ ಗ್ರಾಮಗಳಲ್ಲಿ ಮಹಾರಾಷ್ಟ್ರ ಮೂಲದ ಸ್ವಯಂಸೇವಾ ಸಂಸ್ಥೆಯು ವ್ಯಾಕ್ಸಿನ್ ಹಾಕುತ್ತಿದ್ದು, ಇದರ ವೆಚ್ಚವನ್ನು ಅರಣ್ಯ ಇಲಾಖೆ ಭರಿಸುತ್ತಿದೆ. ಸದ್ಯ ಸುಮಾರು 100ಕ್ಕೂ ಹೆಚ್ಚಿನ ಬೀದಿನಾಯಿಗಳಿಗೆ ಚುಚ್ಚುಮದ್ದು ನೀಡಲಾಗಿದೆ.

Comments

Leave a Reply

Your email address will not be published. Required fields are marked *