ಮಾಲೀಕನ ರಕ್ಷಿಸಿ ತನ್ನ ಪ್ರಾಣ ಬಿಟ್ಟ ಪಪ್ಪಿ

ಚೆನ್ನೈ: ನಾಯಿ ತನ್ನನ್ನು ಸಾಕಿದ ಮನೆಯವರಿಗೆ ಸದಾ ನಿಷ್ಠೆ, ಪ್ರಾಮಾಣಿಕವಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ತಮಿಳುನಾಡಿನ ತಂಜಾವೂರಿನಲ್ಲಿ ತನ್ನ ಮಾಲೀಕನ ಪ್ರಾಣ ಉಳಿಸಿ ನಾಯಿಯೊಂದು ಪ್ರಾಣ ಕಳೆದುಕೊಂಡಿದೆ.

ಈ ಘಟನೆ ತಂಜಾವೂರ್ ಜಿಲ್ಲೆಯ ವೆಂಗರಯಾನಕುಡಿಕಾಡುನಲ್ಲಿ ಶನಿವಾರ ಮುಂಜಾನೆ ನಡೆದಿದೆ. ನಾಡು ರಸ್ತೆ ನಿವಾಸಿ ರೈತ ನಟರಾಜನ್ (50) ಅವರು ತಮ್ಮ ಸಾಕು ನಾಯಿ ಪಪ್ಪಿಯೊಂದಿಗೆ ಮುಂಜಾನೆ ತೋಟಕ್ಕೆ ವಾಕಿಂಗ್ ಹೋಗಿದ್ದಾರೆ.

ನಾನು ನನ್ನ ಪಪ್ಪಿಯೊಂದಿಗೆ ವಾಕಿಂಗ್ ಮಾಡುತ್ತಿದ್ದಾಗ 5 ಅಡಿ ಉದ್ದದ ಹಾವು ನನ್ನ ಮುಂದೆ ಇತ್ತು. ಹಾವನ್ನು ನೋಡಿದ ನಾನು ಭಯದಿಂದ ನಿಂತುಕೊಂಡು ನಿಧಾನವಾಗಿ ಹಿಂದಕ್ಕೆ ಹಜ್ಜೆ ಹಾಕುತ್ತಿದ್ದೆ. ಆಗ ಅದು ನನಗೆ ಕಚ್ಚಲು ಮುಂದಾಯಿತು. ಅಷ್ಟರಲ್ಲಿ ನನ್ನ ಪಪ್ಪಿ ಹಾವಿನ ಮೇಲೆ ದಾಳಿ ಮಾಡಿ ಅದನ್ನು ಸಾಯಿಸಿತು. ಆದರೆ ದಾಳಿ ವೇಳೆ ಹಾವು ಕೂಡ ಪಪ್ಪಿ ಮೇಲೆ ಅನೇಕ ಬಾರಿ ಕಚ್ಚಿತ್ತು. ಇದರಿಂದ ಪಪ್ಪಿ ಅಸ್ವಸ್ಥಗೊಂಡಿತ್ತು. ತಕ್ಷಣ ಪಪ್ಪಿಯನ್ನು ಎತ್ತಿಕೊಂಡು ನಾನು ಚಿಕಿತ್ಸೆಗಾಗಿ ಮನೆ ಕಡೆ ಓಡಿ ಹೋದೆ. ಆದರೆ ವೈದ್ಯರು ಬರುವಷ್ಟರಲ್ಲಿ ಪಪ್ಪಿ ಮೃತಪಟ್ಟಿತ್ತು ಎಂದು ನಟರಾಜನ್ ಹೇಳಿ ಕಣ್ಣೀರಾಕಿದ್ದಾರೆ.

ನಟರಾಜನ್ ಸುಮಾರು ನಾಲ್ಕು ವರ್ಷದಿಂದ ಈ ನಾಯಿಯನ್ನು ಸಾಕುತ್ತಿದ್ದು, ಪಪ್ಪಿ ಅವರ ಕುಟುಂಬದಲ್ಲಿ ಒಬ್ಬನಾಗಿತ್ತು. ನಟರಾಜನ್ ಪತ್ನಿ ಮತ್ತು ಇಬ್ಬರು ಮಕ್ಕಳು ಸಹ ನಾಯಿಯನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರು ಎಲ್ಲೆ ಹೋದರು ಹಿಂಬಾಲಿಸಿಕೊಂಡು ಹೋಗುತ್ತಿತ್ತು.

Comments

Leave a Reply

Your email address will not be published. Required fields are marked *