RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್: ಪೊಲೀಸ್ ಆಯುಕ್ತರಿಗೆ ದೂರು

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಫ್ಯಾನ್ಸ್ ವಾರ್ ಶುರುವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಅತ್ಯಂತ ಕೀಳುಮಟ್ಟಕ್ಕೆ ಹೋಗಿ ಅಭಿಮಾನದ ಪರಕಾಷ್ಟೇ ಮೆರೆಯುವಂತೆ ಕೆಲಸ ಆಗಿದೆ. ಆರ್.ಸಿ.ಬಿ ಸೋಲಿಗೆ ದೊಡ್ಮನೆ ಸೊಸೆಯನ್ನು ಟಾರ್ಗೆಟ್ ಮಾಡಿರುವ ಕೆಲವರು, ಪುನೀತ್ ಪತ್ನಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneet Rajkumar) ಅವರನ್ನ ನಿಂದಿಸಿದ್ದಾರೆ ಕೆಲ ಕಿಡಿಗೇಡಿಗಳು.

ಗಜಪಡೆ (Gajapade) ಹೆಸರಿನ ಪೇಜ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಕೆಟ್ಟದಾಗಿ ನಿಂದನೆ ಮಾಡಲಾಗಿದ್ದು, ನಟ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿದೆ ಈ ‘ಗಜಪಡೆ’ ಖಾತೆ. ಅಭಿಮಾನದ ನೆಪದಲ್ಲಿ ಹೆಣ್ಣಿನ ಬಗ್ಗೆ ಕೀಳಾಗಿ ಕಾಮೆಂಟ್ ಮಾಡಿದ್ದರಂತೆ ಅನೇಕರು ಈ ಗಜಪಡೆ ಖಾತೆಯನ್ನು ನಿರ್ವಹಿಸುತ್ತಿರುವವರ ಬಗ್ಗೆ ಗರಂ ಆಗಿದ್ದಾರೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಬರೆದ ಕೀಳು ಮಟ್ಟದ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಪೊಲೀಸ್ ಕಮಿಷ್ನರ್ (Commissioner) ಭೇಟಿ ಮಾಡಿ ಈಗಾಗಲೇ ದೂರು (Complaints) ಕೂಡ ನೀಡಲಾಗಿದೆ.

ಸಾಕಷ್ಟು ಬಾರಿ ಈ ಫ್ಯಾನ್ಸ್ ವಾರ್ ಕನ್ನಡದಲ್ಲಿ ನಡೆದಿದೆ. ಅದಕ್ಕೆ ಫುಲ್ ಸ್ಟಾಪ್ ಹಾಕುವಂತೆ ಸ್ವತಃ ದರ್ಶನ್ ಅವರೇ ಈ ಹಿಂದೆ ವಿಡಿಯೋ ಮೂಲಕ ಮನವಿ ಮಾಡಿದ್ದರು. ತಮ್ಮ ಅಭಿಮಾನಿಗಳು ಯಾವುದೇ ಕಾರಣಕ್ಕೂ ಬೇರೆಯ ನಟರ ಅಥವಾ ಅಭಿಮಾನಿಗಳನ್ನು ನಿಂದಿಸಬಾರದು ಎಂದು ಮನವಿ ಮಾಡಿದ್ದರು. ಆದರೂ, ಪದೇ ಪದೇ ಇಂತಹ ಘಟನೆಗಳು ನಡೆಯುತ್ತಲೇ ಇವೆ.