ಆಸ್ಪತ್ರೆಗೆ ಕೊರೊನಾ ಶಂಕಿತ ಬಂದಿದ್ದ ಎಂದ ವೈದ್ಯೆಯ ಕೆಲಸ ಹೋಯ್ತು!

ತ್ರಿಶೂರ್: ನಮ್ಮ ಆಸ್ಪತ್ರೆಗೆ ಕೊರೊನಾ ಶಂಕಿತನೊಬ್ಬ ಬಂದಿದ್ದ ಎಂದು ಹೇಳಿದ್ದ ವೈದ್ಯೆಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ. ತ್ರಿಶೂರ್ ಜಿಲ್ಲೆಯ ತಳಿಕುಳಂ ಎಂಬಲ್ಲಿ ಖಾಸಗಿ ಕ್ಲಿನಿಕ್‍ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆ ಶಿನು ಶ್ಯಾಮಲನ್ ಈ ವಿಚಾರವನ್ನು ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿದ್ದಾರೆ.

ಕೊರೊನಾ ವೈರಸ್ ಇದೆ ಎಂದು ಶಂಕಿತ ವ್ಯಕ್ತಿಯೋರ್ವ ನಮ್ಮ ಆಸ್ಪತ್ರೆಗೆ ಬಂದಿದ್ದ. ಬಳಿಕ ಆ ವ್ಯಕ್ತಿ ಕತಾರ್ ಗೆ ಹೋಗಿದ್ದ ಎಂದು ಶಿನು ಶ್ಯಾಮಲನ್ ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದರು. ಆದರೆ ವೈದ್ಯೆಯ ಈ ಕೆಲಸ ಕ್ಲಿನಿಕ್ ಮಾಲೀಕನಿಗೆ ಖುಷಿ ನೀಡಲಿಲ್ಲ. ಬದಲಿಗೆ, ನಮ್ಮ ಕ್ಲಿನಿಕ್‍ಗೆ ಕೊರೊನಾ ಶಂಕಿತ ಬಂದಿದ್ದ ಎಂದರೆ ಬೇರೆ ರೋಗಿಗಳು ನಮ್ಮಲ್ಲಿಗೆ ಬರುತ್ತಾರಾ ಎಂದು ಪ್ರಶ್ನಿಸಿದರು. ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದು ಹೇಳಿದ್ದಾರಂತೆ. ಈ ಎಲ್ಲಾ ವಿಚಾರಗಳನ್ನೂ ಶಿನು ಶ್ಯಾಮಲನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಡಾ.ಶಿನು ಶ್ಯಾಮಲನ್ ಫೇಸ್‍ಬುಕ್ ಪೇಜ್‍ನಲ್ಲಿ ಬರೆದಿದ್ದೇನು?:
ಖಾಸಗಿ ಕ್ಲಿನಿಕ್‍ಗೆ ಬಂದ ರೋಗಿಯಲ್ಲಿ ಸೋಂಕು ಶಂಕೆ ಬಂದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಆರೋಗ್ಯ ಇಲಾಖೆಗೆ, ಮರುದಿನ ಪೊಲೀಸರಿಗೆ ರಿಪೋರ್ಟ್ ಮಾಡಿದ್ದಕ್ಕೆ, ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಕ್ಕೆ, ಟಿವಿ ಚಾನೆಲ್‍ಗಳ ಮುಂದೆ ಹೇಳಿದ್ದಕ್ಕೆ ನನ್ನನ್ನು ಕೆಲಸದಿಂದ ಕೈಬಿಟ್ಟಿದ್ದಾರೆ.

ರೋಗಿಯ ಬಗ್ಗೆಯಾಗಲೀ, ಕ್ಲಿನಿಕ್ ಕುರಿತಾಗಲೀ ನಾನು ಯಾವುದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಮಾಲೀಕರು ಹೇಳುವಂತೆ ಏನೂ ಮಾತನಾಡದೇ ಸುಮ್ಮನಿರಲು ಇದರಲ್ಲಿ ಅಂತಹ ವಿಚಾರವೇನಿದೆ..? ಬಂದಿದ್ದ ವ್ಯಕ್ತಿಗೆ ಕೊರೊನಾ ಬಂದಿತ್ತು ಎಂದು ಗೊತ್ತಾದರೆ ನಮ್ಮ ಕ್ಲಿನಿಕ್‍ಗೆ ಯಾರು ಬರುತ್ತಾರೆ ಎಂಬಿತ್ಯಾದಿ ಸ್ವಾರ್ಥ ಪ್ರಶ್ನೆಗಳಿತ್ತು ಮಾಲೀಕರಿಗೆ. ನಿಮಗೆಲ್ಲಾ ಆರೋಗ್ಯ ಕ್ಷೇತ್ರ ಎನ್ನುವುದು ಬಿಸಿನೆಸ್. ಕ್ಷಮಿಸಿಬಿಡಿ, ತಪ್ಪು ಕಾಣಿಸಿದರೆ ಧೈರ್ಯದಿಂದ ಹೇಳುತ್ತೇನೆ, ಇನ್ನು ಮುಂದೆಯೂ ಅದನ್ನೇ ಮಾಡುತ್ತೇನೆ. ಹೇಳಬೇಕಾದವರಿಗೆ ಹೇಳಿದರೂ ರೋಗಿಯನ್ನು ಕತಾರ್ ಗೆ ಹೋಗಲು ಬಿಟ್ಟವರಿಗೆ ಯಾವ ಸಮಸ್ಯೆಯೂ ಇಲ್ಲ, ಯಾವ ಕ್ರಮವೂ ಇಲ್ಲ. ಆದರೆ ನನಗೆ ನನ್ನ ಕೆಲಸ ಹೋಯಿತು. ಎಂಥಾ ರಾಜ್ಯವಿದು.

ನಾನು ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಇನ್ನು ಮುಂದೆಯೂ ಧ್ವನಿ ಎತ್ತುವೆ.

Comments

Leave a Reply

Your email address will not be published. Required fields are marked *