ತಾಯಿ, ತಂಗಿಯನ್ನ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

ಬೆಂಗಳೂರು: ತಾಯಿ ಮತ್ತು ತಂಗಿಗೆ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿ ವೈದ್ಯನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಸವೇಶ್ವರ ದೇವಸ್ಥಾನದ ಬಳಿ ನಡೆದಿದೆ.

ತಾಯಿ ಶ್ಯಾಮಲಾ ಮತ್ತು ತಂಗಿ ಮೂಕಾಂಬಿಕಾ ಸಾವನ್ನಪ್ಪಿದ ದುರ್ದೈವಿಗಳು. ತಾಯಿ ಮತ್ತು ತಂಗಿ ಓವರ್ ಡೋಸ್ ನಿಂದ ಸಾವನ್ನಪ್ಪಿದ್ದು, ವೈದ್ಯ ಗೋವಿಂದರಾಜು ಆಸ್ಪತ್ರೆಯಲ್ಲಿ ಜೀವನ್ಮರಣ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಸ್ಥಳದಲ್ಲಿ ಡೆತ್ ನೋಟ್ ಲಭ್ಯವಾಗಿದ್ದು, ವೈಯಕ್ತಿಕ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ ಎಂದು ತಿಳಿದು ಬಂದಿದೆ.

ತಾಯಿ ಬಿಪಿ ಮತ್ತು ಶುಗರ್ ನಿಂದ ಬಳಲುತ್ತಿದ್ದರು. ಇತ್ತ ತಂಗಿಗೆ ಮದುವೆ ಆಗಿಲ್ಲ ಎನ್ನುವ ಚಿಂತೆ ಗೋವಿಂದರಾಜುವನ್ನು ಕಾಡುತ್ತಿತ್ತು. ತಾನೋರ್ವ ವೈದ್ಯನಾಗಿದ್ದರೂ, ತಂಗಿಗೆ ಮದುವೆ ಮಾಡಲಿಲ್ಲ ಎಂದು ಜಿಗುಪ್ಸೆಗೆ ಒಳಗಾಗಿದ್ದರಂತೆ. ಇತ್ತ ಪತ್ನಿಯನ್ನು ಕಳೆದುಕೊಂಡಿದ್ದ ಗೋವಿಂದರಾಜುವಿಗೆ ಮಕ್ಕಳಿರಲಿಲ್ಲ. ಆರ್.ಆರ್.ನಗರದಲ್ಲಿ ಆಸ್ಪತ್ರೆ ತೆರೆದು ಜೀವನ ನಡೆಸುತ್ತಿದ್ದರೂ, ನಿರೀಕ್ಷಿತ ಆದಾಯ ಬರುತ್ತಿರಲಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.

ಈ ಎಲ್ಲ ತೊಂದರೆಗಳಿಂದ ಬೇಸತ್ತ ಗೋವಿಂದರಾಜು ತಾಯಿ ಮತ್ತು ತಂಗಿಗೆ ಓವರ್ ಡೋಸ್ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿ, ತಾನು ಅದೇ ರೀತಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗೋವಿಂದರಾಜು ಸಂಬಂಧಿಕರು ಫೋನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಸಿಗದೇ ಇದ್ದಾಗ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸಂಬಂಧಿಕರು ಬರುವಷ್ಟರಲ್ಲಿ ತಾಯಿ ಮತ್ತು ತಂಗಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ತೀವ್ರ ಅಸ್ವಸ್ಥನಾಗಿದ್ದ ಗೋವಿಂದರಾಜುನನ್ನು ಆಸ್ಪತ್ರೆಗೆ ದಾಖಲಿಸಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎರಡು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.youtube.com/watch?v=Eqq6OdIyUYI

Comments

Leave a Reply

Your email address will not be published. Required fields are marked *