ಚಿಕ್ಕಮಗಳೂರು: ಮಲೆನಾಡು ಹಾಗೂ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಶೃಂಗೇರಿ ತಾಲೂಕಿನಲ್ಲಿರುವ ಕಿಗ್ಗಾದ ಮಳೆ ದೇವರು ಋಷ್ಯಶೃಂಗೇಶ್ವರನಿಗೆ ಪೂಜೆ ಸಲ್ಲಿಸಿ ಎಂದು ಅರ್ಚಕರಿಗೆ ಶೃಂಗೇರಿ ಮಠದ ಭಾರತೀ ತೀರ್ಥ ಸ್ವಾಮೀಜಿ ಸೂಚಿಸಿದ್ದಾರೆ.
ಮಲೆನಾಡು ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾಭದ್ರಾ ಸೇರಿದಂತೆ ಹಲವು ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ನದಿ ನೀರಿನ ರಭಸದಿಂದಾಗಿ ಪ್ರವಾಹ ಪರಸ್ಥಿತಿ ಎದುರಾಗಿದ್ದು, ಕೂಡಲೇ ಮಳೆ ದೇವರಾದ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ಪೂಜೆ ಸಲ್ಲಿಸಿ ಎಂದು ಶೃಂಗೇರಿ ಶ್ರೀ ಸೂಚಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ವರುಣದೇವ ಶಾಂತನಾಗಬೇಕಾದರೆ, ಋಷ್ಯಶೃಂಗೇಶ್ವರಿಗೆ ವಿಶೇಷ ಪೂಜೆಯ ಅಗತ್ಯವಿದೆ. ಹೀಗಾಗಿ ಮೂರು ದಿನಗಳ ಕಾಲ ಸತತವಾಗಿ ಅರ್ಚಕರುಗಳು ಸ್ವಾಮಿಗೆ ಅಗಿಲು ಸೇವೆ ಹಾಗೂ ಅಭಿಷೇಕವನ್ನು ಮಾಡಬೇಕೆಂದು ಹೇಳಿದ್ದಾರೆ.
ಕಿಗ್ಗಾದ ಋಷ್ಯಶೃಂಗೇಶ್ವರನು ಮಳೆ ದೇವರೆಂದೇ ಪ್ರಸಿದ್ಧಿ ಹೊಂದಿದೆ. ಅನಾಧಿಕಾಲದಿಂದಲೂ ಜಿಲ್ಲೆಯಲ್ಲಿ ಮಳೆ ಬರಲಿ ಅಥವಾ ಬಾರದೇ ಇದ್ದಾಗ ಸ್ವಾಮಿಗೆ ಸತತ ಮೂರು ದಿನಗಳ ಕಾಲ ಅಗಿಲು ಸೇವೆಯನ್ನು ಮಾಡಿದ ಬಳಿಕ ಮಳೆಯಾಗುತ್ತಿರುವುದು ಪ್ರತೀತಿಯಿದೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾದಗಲೂ ಸಹ ಋಷ್ಯಶೃಂಗನಿಗೆ ಪೂಜೆ ಸಲ್ಲಿಸಿದಾಗ ವರುಣ ಶಾಂತನಾಗುತ್ತಾನೆಂಬುದು ನಂಬಿಕೆ ಜನರಲ್ಲಿದೆ.

ಋಷ್ಯಶೃಂಗೇಶ್ವರನ ಪರಮ ಭಕ್ತರಾದ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್, ಕಳೆದ ಬಾರಿ ಬರಗಾಲವಿದ್ದರಿಂದ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿದ್ದರು.
ರಾಜ್ಯದಲ್ಲಿ ಭೀಕರ ಬರಗಾಲ ಕಾಣಿಸಿಕೊಂಡ್ರೆ ಸರ್ಕಾರ ಹಾಗೂ ಜಿಲ್ಲಾಡಳಿತ ಕಿಗ್ಗದಲ್ಲಿ ನೆಲೆಸಿರೋ ಋಷ್ಯಶೃಂಗೇಶ್ವರ ಸ್ವಾಮಿಯ ಮೋರೆ ಹೋಗುತ್ತೆ. ರಾಜ್ಯದಲ್ಲಿ ಸಮೃದ್ಧ ಮಳೆಯಾಗಲೆಂದು ಸರ್ಕಾರದ ಪ್ರತಿನಿಧಿಗಳು ಪ್ರತಿವರ್ಷವು ಈ ದೇವಾಲಯಕ್ಕೆ ಬಂದು ಹರಕೆ ಕಟ್ಟಿಕೊಂಡು ಇಲ್ಲಿ ವಿಶೇಷ ಹೋಮ ಹಾಗೂ ಹವನಗಳನ್ನ ನಡೆಸಿ ಹೋಗುತ್ತಿರುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply