ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ‘ಡಿಎನ್ಎ’ ದಂಗಲ್ ಆರಂಭವಾಗಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಿದ ‘ಡಿಎನ್ಎ’ ನಾಯಕರಿಂದಾಗಿ ಈ ಪ್ರಶ್ನೆ ಈಗ ಎದ್ದಿದೆ.
ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ನೀಡದ ಸಂಬಂಧ ಕೇಳಲಾದ ಪ್ರಶ್ನೆಗೆ, ಪಕ್ಷ ಸಂಘಟನೆ ಮುಖ್ಯ. ಡಿಎನ್ಎಗಳನ್ನು ನೋಡಿ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಚಾಮರಾಜನಗರದಲ್ಲಿ ಹೇಳಿದ್ದರು. ಈ ಹೇಳಿಕೆಯ ನಂತರ ರಾಜ್ಯ ಬಿಜೆಪಿಯಲ್ಲಿ ಡಿಎನ್ಎ ದಂಗಲ್ ಆರಂಭವಾಗಿದೆ.

ಈ ಹೇಳಿಕೆಯಿಂದ ಬೆಂಗಳೂರು ಬಿಜೆಪಿಯಲ್ಲಿ ಸಂತೋಷ್ ವರ್ಸಸ್ ಡಿಎನ್ಎ ನಡುವಿನ ಫೈಟ್ ಜೋರಾಗಿದ್ದು ಬೆಂಗಳೂರಿನ ಮೋದಿ ಕಾರ್ಯಕ್ರಮದಲ್ಲಿನ ಸಿದ್ಧತೆ ವೇಳೆ ಇದು ಬಯಲಾಗಿದೆ. ಡಿಎನ್ಎ ಚರ್ಚೆ ಪಕ್ಷದ ಒಳಗಡೆಯೇ ನಡೆಯುತ್ತಿರುವಾಗಲೇ ಮೋದಿ ಬೆಂಗಳೂರಿನ ಅರಮನೆ ಮೈದಾನದ ಕಾರ್ಯಕ್ರಮದ ವೇಳೆ ಸಾಲು ಸಾಲು ಡಿಎನ್ಎ ನಾಯಕರು ಸ್ವಾಗತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಡಿಸಿಎಂ ಆರ್.ಅಶೋಕ್ ಅವರ ಪುತ್ರರು ಮತ್ತು ಸೋಮಣ್ಣ ಪುತ್ರ ಸ್ವಾಗತಿಸಿದ್ದಾರೆ.

ಆರ್.ಅಶೋಕ್ ಹಿರಿಯ ಪುತ್ರ ಶರತ್ ಮತ್ತು ಕಿರಿಯ ಪುತ್ರರಿಬ್ಬರನ್ನ ಮೋದಿ ಕೈ ಕುಲುಕಿದ್ದು ಇವರು ಹೂಗುಚ್ಛ ಕೊಟ್ಟಿದ್ದಾರೆ. ಮಾಜಿ ಸಚಿವ ವಿ.ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಕೂಡ ಮೋದಿ ಅವರನ್ನು ಮಾತನಾಡಿಸಿದರು. ಶಾಸಕ ಕೃಷ್ಣಪ್ಪ ಅಳಿಯ ಸುಪ್ರೀತ್, ಮಾಜಿ ಶಾಸಕ ಮುನಿರಾಜು ಅಳಿಯ ಅನಿಲ್ಕುಮಾರ್ ಸಹ ಮೋದಿಯನ್ನು ಸ್ವಾಗತಿಸಿದ್ದಾರೆ.

ಮೋದಿ ಅವರನ್ನು ನಾಯಕರ ಮಕ್ಕಳು ಸ್ವಾಗತಿಸಿದ ವಿಚಾರ ಈಗ ಪಕ್ಷದ ಆಂತರಿಕ ವಲಯದಲ್ಲೇ ಭಾರೀ ಚರ್ಚೆಯಾಗುತ್ತಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಕಾರ್ಯಕರ್ತರು, ಬೇರೆ ಮುಖಂಡರು ಇರಲೇ ಇಲ್ಲವಾ? ಬಿಎಲ್ ಸಂತೋಷ್ ಅವರ ಡಿಎನ್ಎ ಹೇಳಿಕೆಗೆ ತಿರುಗೇಟು ನೀಡಲೆಂದೇ ರಾಜ್ಯ ನಾಯಕರು ಪುತ್ರರನ್ನು ಸ್ವಾಗತಿಸಲು ನಿಲ್ಲಿಸಿದ್ರಾ? ಮಾಜಿ ಡಿಸಿಎಂ ಆರ್.ಅಶೋಕ್ ಅವರ ಸೇನೆಯ ಡಿಎನ್ಎಗಳೇ ಸ್ವಾಗತಕ್ಕೆ ಬೇಕಿತ್ತಾ ಎನ್ನುವ ಪ್ರಶ್ನೆಗಳು ಈಗ ಎದ್ದಿದೆ.

Leave a Reply