5 ಲಕ್ಷಕ್ಕೂ ಅಧಿಕ ಮತಗಳಿಂದ ಡಿಕೆ ಸುರೇಶ್ ಗೆಲುವು: ಸಿಎಂ ಭವಿಷ್ಯ

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರು ದಾಖಲೆಯ ಬಹುಮತದ ಅಂತರದಲ್ಲಿ ಗೆಲವು ಸಾಧಿಸುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಇಂದು ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಬಹುಶಃ ಈ ಲೋಕಸಭಾ ಚುನಾವಣೆಯಲ್ಲಿ ದಾಖಲೆಯ ಬಹುಮತದ ಅಂತರದಲ್ಲಿ ಡಿ.ಕೆ.ಸುರೇಶ್ ಗೆಲುತ್ತಾರೆ ಎಂಬುದಕ್ಕೆ ಯಾವುದೇ ಅನುಮಾನ ಬೇಡ. ಕನಿಷ್ಟ 5 ಲಕ್ಷಕ್ಕೂ ಹೆಚ್ಚಿನ ಬಹುಮತದಿಂದ ಸುರೇಶ್ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದರು.

ನಾವೆಲ್ಲ ಒಟ್ಟಾಗಿ ಜಂಟಿ ರ‍್ಯಾಲಿ ನಡೆಸುತ್ತೇವೆ. ಎಲ್ಲರು ಸೇರಿಕೊಂಡು ಬೆಂಗಳೂರಿನಲ್ಲಿ ಒಂದು ಐತಿಹಾಸಿಕ ಸಭೆ ಮಾಡುತ್ತೇವೆ. ಈಗಾಗಲೇ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಿದ್ಧತೆಗಳು ಸಿದ್ಧತೆಗೊಂಡಿವೆ. ಅವತ್ತಿನ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ 5 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಮತ್ತು ರಾಜ್ಯದ ಜನತೆ ಭಾಗವಹಿಸುತ್ತಾರೆ. ಆ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಒಂದು ಸಂದೇಶ ಕೊಡುವ ಮೂಲಕ ಚುನಾವಣೆ ಪ್ರಚಾರಕ್ಕೆ ಚಾಲನೆ ಕೊಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಇವತ್ತು ಶಿವಮೊಗ್ಗದಲ್ಲಿ ಯಡಿಯೂರಪ್ಪ ಮಾಡದೇ ಇರುವ ಕೆಲಸವನ್ನು ನಾನು ಮಾಡಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಯಾವುದೇ ನೀರಾವರಿ ಕೆಲಸವನ್ನು ಮಾಡಲಿಲ್ಲ. ಆದರೆ ನಾನು ಆ ಅಲ್ಲಿರುವ ನೀರಾವರಿ ಕೆಲಸಗಳಿಗೆ ಚಾಲನೆ ಕೊಟ್ಟಿದ್ದೇನೆ. ಈಗಾಗಲೇ ರೈತರ ಸಾಲಮನ್ನಾಕ್ಕೆ ಚಾಲನೆ ಕೊಟ್ಟಿದ್ದು, 6 ಸಾವಿರ ಕೋಟಿ ಸಾಲಮನ್ನಾ ಆಗಿದೆ. ದಯವಿಟ್ಟು ನನ್ನ ಮೇಲೆ ವಿಶ್ವಾಸ ವಿಡಿ. 11 ಸಾವಿರ ಕೋಟಿ ಹಣವನ್ನು ರೈತರಿಗಾಗಿ ಬಿಡುಗಡೆ ಮಾಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

Comments

Leave a Reply

Your email address will not be published. Required fields are marked *