ಇತಿಹಾಸದಲ್ಲಿ ಇಂದು ಕಪ್ಪು ದಿನ: ಡಿ.ಕೆ.ಸುರೇಶ್

-ಎಲ್ಲದಕ್ಕೂ ಬಿಜೆಪಿಯ ಅಧಿಕಾರ ದಾಹವೇ ಕಾರಣ

ಬೆಂಗಳೂರು: ಬಿಜೆಪಿಯವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಡಿ.ಕೆ.ಶಿವಕುಮಾರ್ ಸೇರಿದಂತೆ ಮೂವರು ಶಾಸಕರನ್ನು ವಶಕ್ಕೆ ಪಡೆದಿರುವುದು ಬಹುಶಃ ಇತಿಹಾಸದಲ್ಲಿ ಇಂದು ಕಪ್ಪು ದಿನ  ಅಂತ ಭಾವಿಸಿದ್ದೇನೆ ಎಂದು ಸುರೇಶ್ ಬೇಸರದಲ್ಲಿ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಶಿವಕುಮಾರ್ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಭೇಟಿಯಾಗಲು ಹೋಗಿದ್ದರು. ಅವರು ಯಾರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿಲ್ಲ. ಕೆಲ ಶಾಸಕರು ಮಾತ್ರ ಜೊತೆಯಲ್ಲಿ ಹೋಗಿದ್ದರು. ಆದರೆ ಅನಾವಶ್ಯಕವಾಗಿ ಇಂದು ಮಹಾರಾಷ್ಟ್ರ ಬಿಜೆಪಿ ಸರ್ಕಾರ ಕರ್ನಾಟಕದ ಶಾಸಕರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದರೆ ಇದರ ಹಿಂದೆ ಸಂಪೂರ್ಣ ಬಿಜೆಪಿ ನಾಯಕರ ಕೈವಾಡವಿದೆ ಎಂದು ದೂರಿದರು.

ನಾವು ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ವಿ. ಆದರೆ ಇದ್ದಕ್ಕಿದ್ದಂತೆ ರೂಮ್ ಕ್ಯಾನ್ಸಲ್ ಮಾಡಿದ್ದಾರೆ. ಇತ್ತ ನಮ್ಮ ಶಾಸಕರನ್ನು ಭೇಟಿ ಮಾಡಲು ಮಹಾರಾಷ್ಟ್ರ ಪೊಲೀಸರು ಅವಕಾಶ ಮಾಡಿಕೊಡುತ್ತಿಲ್ಲ. ಹೀಗಾಗಿ ಇದರ ಹಿಂದೆ ಬಿಜೆಪಿ ನಾಯಕರಿದ್ದಾರೆ. ಬಿಜೆಪಿ ಅವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಡಿ.ಕೆ.ಶಿವಕುಮಾರ್ ಸೇರಿದಂತೆ ಮೂವರು ಶಾಸಕರನ್ನು ಬಂಧಿಸಿರುವುದು ಬಹುಶಃ ಇತಿಹಾಸದಲ್ಲಿ ಇಂದು ಕಪ್ಪು ದಿನ ಅಂತ ಭಾವಿಸಿದ್ದೇನೆ ಎಂದು ಸುರೇಶ್ ಬೇಸರದಲ್ಲಿ ಹೇಳಿದರು.

ಡಿ.ಕೆ.ಶಿವಕುಮಾರ್ ಅವರನ್ನು ಯಾವುದಾದರೂ ಠಾಣೆಗೆ ಅಥವಾ ಜೈಲಿಗೆ ಕರೆದುಕೊಂಡು ಹೋಗಿರುತ್ತಾರೆ. ಏನ್ ಮಾಡೋಕೆ ಆಗುತ್ತೆ, ಎಲ್ಲವನ್ನು ಅನುಭವಿಸಬೇಕು. ಬಿಜೆಪಿ ಅವರು ಇನ್ನೂ ಏನೇನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಇದೆಲ್ಲದಕ್ಕೂ ಬಿಜೆಪಿ ನಾಯಕರ ಅಧಿಕಾರದ ದಾಹವೇ ಕಾರಣ ಎಂದು ಸುರೇಶ್ ಆರೋಪಿಸಿದರು.

ನಾನು ಫೋನ್ ಮಾಡಿದಾಗ ಈ ರೀತಿ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು ಅಷ್ಟೇ. ಹೀಗಾಗಿ ಮಳೆ, ಗಾಳಿ, ಚಳಿ, ಬಿಸಿಲು ಏನೇ ಆದರೂ ಎಲ್ಲದಕ್ಕೂ ಸಿದ್ಧವಾಗಿದ್ದೇವೆ ಎಂದು ಕೋಪದಿಂದ ಸುರೇಶ್ ಹೇಳಿದರು.

ಇದು ಪಕ್ಷದ ಅಸ್ಥಿತ್ವದ ಪ್ರಶ್ನೆ. ಮುಂಬೈನಲ್ಲಿರುವ ಅತೃಪ್ತ ಶಾಸಕರು ಕಾಂಗ್ರೆಸ್ ಪಕ್ಷವನ್ನು ಕಷ್ಟಪಟ್ಟು ಕಟ್ಟಿದ್ದಾರೆ. ಹೀಗಾಗಿ ಅಂತಹವರು ಈ ರೀತಿ ರಾಜೀನಾಮೆ ನೀಡಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಅವರು ಒತ್ತಡದಲ್ಲಿ ಮಾತನಾಡುತ್ತಿದ್ದಾರೆ. ಅವರು ಕೂಡ ನಾವು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇವೆ ಎಂದು ಸ್ಪಷ್ಟ ಪಡಿಸಿದ್ದಾರೆ. ಹಾಗಾಗಿ ಕಾಂಗ್ರೆಸ್‍ನವರು ಹೋಗಿ ಮಾತನಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದರು.

ಒಂದು ಪಕ್ಷ ಎಂದರೆ ಅದು ಒಂದು ಕುಟುಂಬ ಇದ್ದಂತೆ. ನಮ್ಮ ಕುಟುಂಬದವರ ಜೊತೆ ಮಾತನಾಡಬೇಕು ಎಂದು ಶಿವಕುಮಾರ್ ಹೋಗಿದ್ದರು. ಅವರು ಶಿವಕುಮಾರ್ ಅವರಿಗೆ ಬೈಯುತ್ತಾರ, ಹೊಡೆಯುತ್ತಾರ ಹೊಡೆಯಲಿ ಅವರಿಗೆ ಆ ಹಕ್ಕಿದೆ. ಬೈರತಿ ಬಸವರಾಜ್, ಸೋಮಶೇಖರ್ ಸೇರಿದಂತೆ ಇತರೆ ಶಾಸಕರು ಸೇರಿದಂತೆ ಎಲ್ಲರಿಗೂ ಬೈಯುವ, ತೆಗಳುವ ಹಕ್ಕಿದೆ. ಒಂದು ಕುಟುಂಬ ಎಂದರೆ ಜಗಳ, ಕೋಪ ಇದ್ದೇ ಇರುತ್ತದೆ. ಏನೇ ತಪ್ಪಾಗಿದ್ದರೂ ಅದನ್ನು ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡಲು ಮುಂಬೈಗೆ ಹೋಗಿದ್ದರು ಎಂದು ಸುರೇಶ್ ತಿಳಿಸಿದರು.

Comments

Leave a Reply

Your email address will not be published. Required fields are marked *