ಇಡಿ ಚಾರ್ಜ್‌ಶೀಟ್‌ ಸಲ್ಲಿಕೆಗೆ ನಾವು ಹೆದರುವುದಿಲ್ಲ: ಡಿ.ಕೆ.ಸುರೇಶ್

ಬೆಂಗಳೂರು: ಚಾರ್ಜ್‌ಶೀಟ್‌ ಸಲ್ಲಿಕೆಗೆ ನಾವು ಹೆದರುವ ಅಗತ್ಯವಿಲ್ಲ. ಚಾರ್ಜ್ ಶೀಟ್ ಸಲ್ಲಿಕೆ ಒಂದು ಕಾನೂನು ಪ್ರಕ್ರಿಯೆಯಷ್ಟೇ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಇಡಿ ಚಾರ್ಜ್‌ಶೀಟ್‌ ಸಲ್ಲಿಸಿದೆ. ಈ ಕುರಿತಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್ ಅವರು, ಚಾರ್ಜ್‌ಶೀಟ್‌ ಸಲ್ಲಿಕೆಗೆ ನಾವು ಹೆದರುವ ಅಗತ್ಯವಿಲ್ಲ. ಚಾರ್ಜ್‌ಶೀಟ್‌ ಸಲ್ಲಿಕೆ ಒಂದು ಕಾನೂನು ಪ್ರಕ್ರಿಯೆ. ಚಾರ್ಜ್‌ಶೀಟ್‌ನಲ್ಲಿ ಏನಿದೆ ಅಂತಾ ನಮಗೂ ಗೊತ್ತಿಲ್ಲ. ನಿಮಗೂ ಗೊತ್ತಿಲ್ಲ. ನಮ್ಮ ವಕೀಲರ ಜೊತೆ ಚರ್ಚಿಸುತ್ತೇವೆ. ಚಾರ್ಜ್‌ಶೀಟ್‌ ಕಾಪಿ ನಾಳೆ ಅಥವಾ ಸೋಮವಾರ ಸಿಗಬಹುದು. ಸಿಕ್ಕ ನಂತರ ನಮ್ಮ ಕಾನೂನು ಹೋರಾಟ ಏನು ಎನ್ನುವುದನ್ನು ನಿರ್ಧರಿಸುತ್ತೇವೆ ಎಂದರು.

ರಾಜಕೀಯ ಪ್ರೇರಿತವಾಗಿ ನಮ್ಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ನಮ್ಮ ಹೋರಾಟ ನಡೆಯುತ್ತಿರುತ್ತದೆ. ನಾವು ಹೆದರುವ ಪ್ರಶ್ನೆಯೇ ಇಲ್ಲ. ಏನೇ ಷಡ್ಯಂತ್ರ ಮಾಡಿದರೂ ನಾವು ಹೆದರಲ್ಲ. ನಾವು ಮಾನಸಿಕವಾಗಿ, ದೈಹಿಕವಾಗಿ ಎಲ್ಲ ರೀತಿಯಲ್ಲಿ ಪ್ರಕರಣ ಎದುರಿಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ – ಡಿಕೆಶಿ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಸ್ವಾಯತ್ತ ಸಂಸ್ಥೆಗಳು ಕೈಕಟ್ಟಿ ಕುಳಿತಿವೆ. ಐಟಿ, ಸಿಬಿಐ, ಇಡಿ ಮಾಧ್ಯಮಗಳು ತಮ್ಮ ಸ್ವಂತ ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತಿಲ್ಲ. ನ್ಯಾಯಾಲಗಳ ಮೇಲೂ ಒತ್ತಡವಿದೆ. ವಿರೋಧ ಪಕ್ಷವಾಗಿ ನಾವು ಇವರಿಂದ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವಾಗುತ್ತಾ? ಏನು ಚಾರ್ಜ್‌ಶೀಟ್‌ ಹಾಕಿದ್ದಾರೆ, ಅದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಬಿಜೆಪಿಯ ಏನೇ ತಂತ್ರ, ಒಳಸಂಚು ಮಾಡಿದರೂ ನಾವು ಅದರ ವಿರುದ್ಧ ಸಂಪೂರ್ಣ ಹೋರಾಟ ಮಾಡುತ್ತೇವೆ. ಏನೋ ಆಗಿಬಿಡುತ್ತದೆ ಅಂತಾ ನಾವು ಹೆದರಿಕೊಂಡಿಲ್ಲ. ವಿಚಾರಣೆ 4 ವರ್ಷದಿಂದ ನಡೆಯುತ್ತಿದೆ ಇನ್ನು ನಡೆಯಲಿ ಎಂದು ಹೇಳಿದರು.

ಬಂಧನವಾದ 180 ದಿನದಲ್ಲಿ ಅಂದರೆ 6 ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗಬೇಕಿತ್ತು. ಆದರೆ 2-3 ವರ್ಷದ ನಂತರ ಸಲ್ಲಿಕೆ ಮಾಡಿದ್ದಾರೆ. ಶರ್ಮಾ, ಸಚಿನ್ ನಾರಾಯಣ್, ಡಿಕೆಶಿ ನಿವಾಸದಲ್ಲಿ ಸಿಕ್ಕ ಹಣದ ಮೇಲೆ ಕೇಸು ನಡೆಯುತ್ತಿತ್ತು. ಚಾರ್ಜ್ ಶೀಟ್ ನಲ್ಲಿ ಏನಿದೆ ನೋಡಿ ತೀರ್ಮಾನ ಮಾಡುತ್ತೇವೆ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಲಾ ಬಸ್ ಹರಿದು ಬಾಲಕಿ ಸಾವು

Comments

Leave a Reply

Your email address will not be published. Required fields are marked *