ಬೆಂಗ್ಳೂರಲ್ಲಿ ರಮೇಶ್ ಜಾರಕಿಹೊಳಿಯನ್ನು ಏಕಾಂಗಿಯಾಗಿ ಭೇಟಿಯಾದ್ರು ಡಿಕೆ ಸುರೇಶ್!

ಬೆಂಗಳೂರು: ದಿನದಿಂದ ದಿನಕ್ಕೆ ಪೌರಾಡಳಿತ ಮತ್ತು ಒಂದು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಮತ್ತು ಸಚಿವ ಡಿ.ಕೆ. ಶಿವಕುಮಾರ್ ಅವರ ನಡುವಿನ ವಾದ-ವಿವಾದ ನಡೆಯುತ್ತಿದ್ದು, ಈಗ ಅಣ್ಣನ ಪರವಾಗಿ ಸಂಸದ ಡಿ.ಕೆ ಸುರೇಶ್ ಅವರು ಸಂಧಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ ಹೋಗುವ ಮುನ್ನ ಸಂಧಾನ ಮಾಡುವ ಸಲುವಾಗಿ ಬೆಂಗಳೂರಿನಲ್ಲೇ ಜಾರಕಿಹೊಳಿಯನ್ನು ಡಿ.ಕೆ. ಸುರೇಶ್ ಏಕಾಂಗಿಯಾಗಿ ಭೇಟಿಯಾಗಿದ್ದಾರೆ. ಭೇಟಿಯ ವೇಳೆ ಬೆಳಗಾವಿ ರಾಜಕೀಯದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ನಿಮ್ಮ ಜಿಲ್ಲೆಯ ವಿವಾದದಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮಾಡಿಲ್ಲ. ನೀವು ಅವರನ್ನು ತಪ್ಪಾಗಿ ತಿಳಿದುಕೊಂಡಿದ್ದೀರಿ. ಡಿ.ಕೆ. ಶಿವಕುಮಾರ್ ಯಾರ ವಕಾಲತ್ತೂ ವಹಿಸಿಲ್ಲ. ಬೆಳಗಾವಿ ರಾಜಕೀಯ ನಿಮ್ಮ ಆಂತರಿಕ ವಿಚಾರವಾಗಿದೆ. ನೀವು ರಾಜೀನಾಮೆ ನೀಡುತ್ತೀರಿ ಅಂತ ಮಾಧ್ಯಮಗಳಲ್ಲಿ ವರದಿ ಆಗಿದೆ. ಈ ವಿವಾದದಿಂದ ಸರ್ಕಾರ ಕೂಡ ಬಿದ್ದು ಹೋಗುತ್ತೆ ಅಂತಿದ್ದಾರೆ. ತಾವು ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳುವುದು ಬೇಡ. ಸರ್ಕಾರ ಅಸ್ಥಿರಗೊಳಿಸಿದ ಅಪಖ್ಯಾತಿ ನಮಗೂ ಬೇಡ, ನಿಮಗೂ ಬೇಡ ಎಂದು ಸಂಧಾನದಲ್ಲಿ ಮಾತುಕತೆ ವೇಳೆ ಸಂಸದ ಡಿ.ಕೆ. ಸುರೇಶ್ ಜಾರಕಿಹೊಳಿಯವರಿಗೆ ಮನದಟ್ಟು ಮಾಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಹಗ್ಗ ಜಗ್ಗಾಟದಲ್ಲಿ ಡಿ.ಕೆ.ಶಿವಕುಮಾರ್ ಪಾತ್ರವಿದೆ ಎಂಬ ಆರೋಪದಿಂದ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಪಾರು ಮಾಡಲು ಡಿ.ಕೆ.ಸುರೇಶ್ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬೆಳಗಾವಿ ವಿವಾದದಲ್ಲಿ ಸಹೋದರ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ತಡೆಯುವ ಪ್ರಯತ್ನವನ್ನು ಸಂಸದ ಡಿ.ಕೆ.ಸುರೇಶ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=iXC65Yt-Jp8

Comments

Leave a Reply

Your email address will not be published. Required fields are marked *