ಐಟಿ ದಾಳಿ ಬಳಿಕ ಕಬ್ಬಾಳಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಡಿಕೆಶಿ ತಾಯಿ

ರಾಮನಗರ/ ಮಂಡ್ಯ: ಇಂಧನ ಸಚಿವ ಡಿ ಕೆ ಶಿವಕುಮಾರ್ ಮನೆ ಮೇಲೆ ಸತತ ಮೂರು ದಿನಗಳ ಐಟಿ ದಾಳಿ ಬಳಿಕ ಅವರ ತಾಯಿ ಇಂದು ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಬೆಳಗ್ಗೆ ಕೋಡಿಹಳ್ಳಿ ನಿವಾಸದಿಂದ ಕಬ್ಬಾಳಮ್ಮ ದೇವಾಲಯಕ್ಕೆ ಸಚಿವ ಡಿ ಕೆ ಶಿವಕುಮಾರ್ ತಾಯಿ ಗೌರಮ್ಮ ಭೇಟಿ ನೀಡಿ, ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆ ಹಾಗು ಅರ್ಚನೆ ಮಾಡಿಸಿದ್ದಾರೆ. ಇನ್ನೂ ತಮ್ಮ ಇಷ್ಟದ ದೇವತೆ ಹಾಗೂ ತಾವು ನಂಬಿರುವ ದೇವರಿಗೆ ಸಚಿವ ಡಿ ಕೆ ಶಿವಕುಮಾರ್ ಸಹ ಪೂಜೆ ಸಲ್ಲಿಸಲು ಇಂದು ಆಗಮಿಸುತ್ತಿದ್ದಾರೆ.

ಡಿಕೆಶಿ ತಾಯಿ ಗೌರಮ್ಮ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಅರ್ಚಕ ಕಬ್ಬಾಳೇಗೌಡ ಮಾತನಾಡಿ, ಇಂದು ಬೆಳಗ್ಗೆ ಕಬ್ಬಾಳಮ್ಮ ದೇಗುಲಕ್ಕೆ ಡಿಕೆಶಿ ತಾಯಿ ಭೇಟಿ ನೀಡಿದ್ದರು. ಅವರು ಕಬ್ಬಾಳಮ್ಮ ದೇವರಲ್ಲಿ ಹರಕೆ ಕಟ್ಟಿಕೊಂಡಿದ್ದರು. ಕಬ್ಬಾಳಮ್ಮ ಬೇಡಿದವರಿಗೆ ಇಷ್ಟಾರ್ಥ ಈಡೇರಿಸುತ್ತಾರೆ. ಪೂಜೆಯ ವೇಳೆ ಕಬ್ಬಾಳಮ್ಮ ಬಲಗಡೆ ಹೂಕೊಟ್ಟರು ಅಂತ ಹೇಳಿದ್ರು.

ತಾಯಿಯ ಪೂಜೆಯ ವೇಳೆ ಡಿಕೆಶಿ ಅಭಿಮಾನಿಗಳು ಕಬ್ಬಾಳಮ್ಮ ದೇವಾಲಯದ ಬಳಿ ನಿಂತು ಡಿಕೆಶಿಗೆ ಒಳ್ಳೆಯದಾಗಲಿ ಎಂದು ಹರಕೆ ಕಟ್ಟಿಕೊಂಡಿದ್ದಾರೆ. ಅವರಿಗೆ ಒಳ್ಳೆಯದಾದಲ್ಲಿ 18 ತೆಂಗಿನಕಾಯಿ ಹೊಡೆಯುತ್ತೇನೆ ಅಂತ ಡಿಕೆಶಿ ಅಭಿಮಾನಿ ಕೃಷ್ಣೇಗೌಡ ಹರಕೆ ಕಟ್ಟಿಕೊಂಡಿದ್ದಾರೆ ಅಂತ ಅವರು ಹೇಳಿದ್ರು.

ಇದೇ ವೇಳೆ ಕಬ್ಬಾಳಮ್ಮ ದೇವರ ಸನ್ನಿಧಿಯಲ್ಲಿ ತಲೆ ಬೋಳಿಸಿಕೊಂಡು ಡಿಕೆಶಿ ಅಭಿಮಾನಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ದಂಡು ಹುಚ್ಚಯ್ಯ ಹರಕೆ ತೀರಿಸಿದ್ದಾರೆ. ಅಲ್ಲದೇ ದೇವಾಲಯದಲ್ಲಿ ಅಭಿಮಾನಿಗಳು ಉರುಳು ಸೇವೆ ಸಲ್ಲಿಸಿದ್ದಾರೆ.

ಐಟಿ ಅಧಿಕಾರಿಗಳ ವಿಚಾರಣೆ ಮುಗಿಸಿದ ಡಿಕೆ ಶಿವಕುಮಾರ್ ತಾವು ನಂಬಿದ ದೇವಸ್ಥಾನ ಹಾಗೂ ಮಠಕ್ಕೆ ಭೇಟಿಕೊಟ್ಟು ಆಶೀರ್ವಾದ ಪಡೆಯುತಿದ್ದಾರೆ. ಅದೇ ರೀತಿ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡುಸಿದ್ದೇಶ್ವರ ಮಠಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ. ಡಿಕೆಶಿ ಈ ಹಿಂದೆ ಹಲವು ಬಾರಿ ಕಾಡು ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಶಿವಯೋಗೇಶ್ವರ ಕರಿಬಸವ ಸ್ವಾಮಿಗಳು ಶಾಸ್ತ್ರ ಹೇಳೋದ್ರಲ್ಲಿ ಪರಿಣತಿ ಹೊಂದಿದ್ದು ಡಿಕೆಶಿ ಗೆ ಹಲವು ಬಾರಿ ಶಾಸ್ತ್ರ ಹೇಳಿದ್ರು ಎನ್ನಲಾಗಿದೆ.

Comments

Leave a Reply

Your email address will not be published. Required fields are marked *