ತಿರುವಳ್ಳೂರಿನ ವಿಷ್ಣುದೇವರ ಮೊರೆಹೋದ ಮಾಜಿ ಸಚಿವ ಡಿಕೆಶಿ!

ಬೆಂಗಳೂರು: ಮಾಜಿ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರು ತಮಿಳುನಾಡಿನ ತಿರವಳ್ಳೂರಿನ ವಿಷ್ಣುದೇವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ರಾಜ್ಯದ ಮೈತ್ರಿ ಸರ್ಕಾರ ಸಂಪುಟ ರಚನೆ ಹಗ್ಗಜಗ್ಗಾಟದ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಸಿಎಂ ಕುಮಾರಸ್ವಾಮಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ, ಸಂಪುಟ ವಿಸ್ತರಣೆ ಹಾಗೂ ಲೋಕಸಭಾ ಚುನಾವಣೆಯ ಮೈತ್ರಿ ಕುರಿತು ಸ್ಪಷ್ಟನೆ ನೀಡಿದ್ದರು. ಇದಾದ ಬಳಿಕ ಶುಕ್ರವಾರವೇ ದೇವಾಲಯಕ್ಕೆ ಭೇಟಿ ನೀಡಿರುವ ಡಿಕೆ ಶಿವಕುಮಾರ್ ಅವರು ವಿಶೇಷ ಪೂಜೆ ಹಾಗೂ ಹೋಮ ಹವನ ನಡೆಸಿದ್ದಾರೆ.

ದೇವಾಲಯಕ್ಕೆ ಕುಟುಂಬದ ಸದಸ್ಯರು ಹಾಗೂ ಆಪ್ತರು ಮಾತ್ರ ಭೇಟಿ ನೀಡಿದ್ದಾರೆ. ಹಿರಿಯ ಜ್ಯೋತಿಷಿಗಳ ಮುಂದಾಳತ್ವದಲ್ಲಿ ಪೂಜೆ ಹಾಗೂ ಹೋಮ ಕಾರ್ಯ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿದ್ದು, ಈ ವೇಳೆ ಯಾರೊಂದಿಗೂ ಮಾತನಾಡದೆ ಪೂಜೆ ಕಾರ್ಯದಲ್ಲಿ ಡಿಕೆಶಿ ಮಗ್ನರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಸಮ್ಮಿಶ್ರ ಸರ್ಕಾರದ ರಚನೆ ಹಾಗೂ ಸಂಪುಟ ವಿಸ್ತರಣೆಯಲ್ಲಿ ಡಿ.ಕೆ ಶಿವಕುಮಾರ್ ಅವರು ಪ್ರಮುಖ ಕಾರ್ಯನಿರ್ವಹಿಸಿದ್ದರು. ಇದೇ ವೇಳೆ ಸಿಬಿಐ ಅಧಿಕಾರಿಗಳು ಡಿಕೆಶಿ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿತ್ತು.

ಸಂಪುಟ ವಿಸ್ತರಣೆಯಲ್ಲಿ ಡಿ.ಕೆ ಶಿವಕುಮಾರ್ ಅವರು ಇಂಧನ ಖಾತೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಅಂಶ ಕಾಂಗ್ರೆಸ್ ವಲಯದಿಂದ ಕೇಳಿ ಬಂದಿತ್ತು. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿ ತಾನು ಯಾವುದೇ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಪಕ್ಷದ ನಾಯಕರು, ಹೈಕಮಾಂಡ್ ನೀಡುವ ಜವಾಬ್ದಾರಿ ನಿರ್ವಹಿಸುವುದಾಗಿ ತಿಳಿಸಿದ್ದರು. ಅಲ್ಲದೇ ಈ ವೇಳೆ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ ಅವರು ಬುಧವಾರ ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ಮಾಹಿತಿಯನ್ನು ನೀಡಿದ್ದರು.

Comments

Leave a Reply

Your email address will not be published. Required fields are marked *