ರಮೇಶ್ ಜಾರಕಿಹೊಳಿ ನನಗೆ ಎರಡು ಏಟು ಹೊಡೆದ್ರೂ ಬೇಜಾರಿಲ್ಲ : ಡಿಕೆಶಿ ತಿರುಗೇಟು

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನನಗೆ ಎರಡು ಏಟು ಹೊಡೆದರೂ ನನಗೇನು ಬೇಜಾರಿಲ್ಲ ಎಂದು ಬೃಹತ್ ನೀರಾವರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರ ನಿವಾಸಕ್ಕೆ ಆಗಮಿಸಿ ಸಚಿವರು ಆಪರೇಷನ್ ಕಮಲದ ಕುರಿತು ಚರ್ಚೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು ಡಿ.ಕೆ.ಶಿವಕುಮಾರ್ ನನ್ನ ಸಮನಾದ ಲೀಡರ್ ಅಲ್ಲ ಎನ್ನುವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ರಮೇಶ್ ನಮ್ಮ ಫ್ರೆಂಡ್, ನಮ್ಮ ಮನೆಯವರು. ಅದೆಲ್ಲ ಏನು ತೊಂದರೆ ಇಲ್ಲ. ನಾವು ಸ್ವಂತ ಮನೆ ಮಕ್ಕಳು. ಒಂದೊಂದು ಸಾರಿ ಜಗಳ ಆಗುತ್ತೆ ಏನ್ ಮಾಡೋಕೆ ಆಗುತ್ತೆ? ಅಣ್ಣ-ತಮ್ಮಂದಿರು ಜಗಳ ಆಡಿದ್ವಿ ಅಂತ ಅವರನ್ನ ಬಿಡೋಕೆ ಆಗುತ್ತಾ? ನಾವೆಲ್ಲ ಒಂದು ಪಾರ್ಟಿಯಲ್ಲಿ ಇರುವವರು ಎಂದು ಕಾಲೆಳೆದರು.

10 ಜನ ಶಾಸಕರು ಒಟ್ಟಾಗಿ ರಾಜೀನಾಮೆ ಕೊಡುತ್ತೇವೆ ಎನ್ನುವ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಕಾಂಗ್ರೆಸ್‍ನ 80 ಜನ ಶಾಸಕರು ಅವರ ಜೊತೆಯೇ ಇದ್ದೀವಿ. ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ನಾಯಕ. ಯೂತ್ ಕಾಂಗ್ರೆಸ್‍ನಿಂದ ಬಂದು, ಶಾಸಕರಾಗಿ, ಸಚಿವರಾದವರು. ಪಾಪ ಒಂದೊಂದು ಬಾರಿ ಹಾಗೇ ಮಾತಾಡುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.

ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು ಈ ಹಿಂದೆ ನಾನು ಮುಖ್ಯಮಂತ್ರಿ ಅಭ್ಯರ್ಥಿ ಅಂತ ಹೇಳಿದ್ದರು. ಸಿಎಂ ಸ್ಥಾನ ಸಿಗಲಿಲ್ಲ ಅಂತ ಅವರು ಪಕ್ಷ ಬಿಟ್ಟು ಹೋಗ್ತಾರಾ? ರಮೇಶ್ ಕೂಡ ಹಾಗೇ ಎಂದು ಮಾಜಿ ಸಚಿವರ ಪರ ಬ್ಯಾಟ್ ಬೀಸಿದರು.

ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರು ಪರಸ್ಪರ ವಾಗ್ದಾಳಿ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ರಮೇಶ್ ಹಾಗೂ ಸತೀಶ್ ಅಣ್ಣ ತಮ್ಮಂದಿರು. ಹೀಗಾಗಿ ಅವರಿಬ್ಬರು ಮಾತಾಡಿಕೊಳ್ಳುತ್ತಾರೆ. ಅದರಲ್ಲಿ ಏನು ತಪ್ಪಿಲ್ಲ ಎಂದರು.

ಸರ್ಕಾರ ಬೀಳುತ್ತೆ ಅಂತ ಯಾವ ಕಾಂಗ್ರೆಸ್ ಶಾಸಕರು ಹೇಳಿಲ್ಲ. ಪಾಪ ಅವರು ತಮ್ಮ ಕೆಲಸ ಮಾಡಿಕೊಂಡು ಹೊಗುತ್ತಿದ್ದಾರೆ. ನಿಮಗೆ ಸುದ್ದಿ ಬೇಕು ಅಂತ ಹೀಗೆ ಮಾತನಾಡುತ್ತೀದ್ದೀರಾ ಅಷ್ಟೆ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದರು.

Comments

Leave a Reply

Your email address will not be published. Required fields are marked *