ಎಲ್ಲವನ್ನೂ ಗೆದ್ದು ಬರ್ತೀನಿ, ಬಿಜೆಪಿ ನಾಯಕರ ಬಂಡವಾಳ ಬಿಚ್ಚಿಡುತ್ತೇನೆ – ಶಿವಕುಮಾರ್

ನವದೆಹಲಿ: ನೋಡುತ್ತಾ ಇರಿ, ಎಲ್ಲವನ್ನೂ ಗೆದ್ದು ಬರುತ್ತೇನೆ. ಬಿಜೆಪಿ ನಾಯಕರ ಒಬ್ಬೊಬ್ಬರ ಬಂಡವಾಳವನ್ನೂ ಬಿಚ್ಚಿಡುತ್ತೇನೆ ಎಂದು ಇಡಿ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಖಡಕ್ಕಾಗಿ ನುಡಿದಿದ್ದಾರೆ.

ಇಂದು ದೆಹಲಿ ಕೋರ್ಟಿನಲ್ಲಿ ವಿಚಾರಣೆಗೆ ಹಾಜರಾದ ವೇಳೆ ಡಿಕೆಶಿ ಅವರು ತಮ್ಮ ಆಪ್ತರ ಜೊತೆ ಈ ರೀತಿಯಾಗಿ ಮಾತನಾಡಿದ್ದಾರೆ.

ಯಡಿಯೂರಪ್ಪ ರಾಚೇನಹಳ್ಳಿ ಆಸ್ತಿ ಕೊಂಡಿದ್ದು ಎಷ್ಟಕ್ಕೆ ಹಾಗೂ ಅದನ್ನು ಮಾರಿದ್ದು ಎಷ್ಟಕ್ಕೆ ಎಂದು ಎಲ್ಲವೂ ನನಗೆ ಗೊತ್ತಿದೆ. ಅಂದು 20 ಲಕ್ಷಕ್ಕೆ ಯಡಿಯೂರಪ್ಪ ಕೊಂಡಿದ್ದು, 40 ಕೋಟಿಗೆ ಜಿಂದಾಲ್ ಗೆ ಮಾರಿದ್ದಾರೆ. ನಾನೊಬ್ಬನೇ ತಪ್ಪು ಮಾಡಿದ್ದೀನಾ ಎಂದು ಪ್ರಶ್ನಿಸಿರುವ ಡಿಕೆಶಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಕಾಲ ಬರಲಿ ಎಂದಿದ್ದಾರೆ.

ನನ್ನ ಮಗಳು ಆಸ್ತಿ ಹೆಚ್ಚಾಗಿದೆ. ನನ್ನ ಆಸ್ತಿ ಹೆಚ್ಚಾಗಿದೆ ಎಂದು ಮಾತನಾಡಿದ್ದಾರೆ. ಆಸ್ತಿ ಮೌಲ್ಯ ಹೆಚ್ಚಳ ಆಗಿದೆ. ಈ ಬಗ್ಗೆ ಎಲ್ಲರಿಗೂ ಉತ್ತರ ಕೊಡುತ್ತೇನೆ. ಬಂಗಾರಪ್ಪ ಲೇಔಟ್ ನಲ್ಲಿ ನಾನು ಒಂದು ಲಕ್ಷಕ್ಕೆ ಸೈಟ್ ಕೊಂಡುಕೊಂಡಿದ್ದೆ. ಈಗ ಅದೇ ಸೈಟು ನಾಲ್ಕು ಕೋಟಿ ಬೆಲೆ ಬಾಳುತ್ತದೆ. ಆಸ್ತಿ ಮೌಲ್ಯ ಹೆಚ್ಚಾಗಿದೆ. ಅದಕ್ಕೆ ನಾನೇನು ಮಾಡಲು ಸಾಧ್ಯ ಎಂದು ಡಿಕೆಶಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ 15ರವರೆಗೆ ಡಿಕೆಶಿಗೆ ತಿಹಾರ್ ಜೈಲೇ ಗತಿ

ಇದೇ ವೇಳೆ ಕೋರ್ಟ್ ಆವರಣದಲ್ಲಿ ಸಂಸದ ಡಿಕೆ ಸುರೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಆತ್ಮಸ್ಥೈರ್ಯದಿಂದ ಇದ್ದಾರೆ. ಬೆಂಬಲಿಗರಿಗೆ ಧೈರ್ಯ ನೀಡಿದ್ದಾರೆ. ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ. ಆರೋಪದಿಂದ ಮುಕ್ತಿ ಸಿಗಲಿದೆ. ಕೋರ್ಟಿನಲ್ಲಿ ಜಯ ಸಿಗಲಿದೆ. ಬಂಡೆ ಜಗ್ಗಲ್ಲ, ಬಗ್ಗಲ್ಲ, ಬಿಸಿಲು, ಮಳೆ ಬಂದರೂ ಅಲ್ಲಾಡಲ್ಲ. ಮುಂದಿನ ದಿನಗಳಲ್ಲಿ ನೀವೆಲ್ಲ ನೋಡಲಿದ್ದೀರಿ ಎಂದು ಹೇಳಿದ್ದಾರೆ.

14 ದಿನಗಳ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಹೈಕೋರ್ಟಿನಲ್ಲಿ ಬೇಲ್ ಅರ್ಜಿ ಹಾಕಿದ್ದೇವೆ. ಅದು 14 ರಂದು ವಿಚಾರಣೆ ಬರಲಿದೆ. ಹೈಕೋರ್ಟ್ ಆದೇಶದ ಆಧಾರದ ಮೇಲೆ ಮುಂದಿನ ಹೆಜ್ಜೆ ಇಡುತ್ತೇವೆ. ವಿಚಾರಣೆಗೆ ಅವಕಾಶ ಇಡಿ ಅಧಿಕಾರಿಗಳು ಕೇಳಿದ್ದಾರೆ. ವಿಚಾರಣೆಗೆ ನಮ್ಮ ವಕೀಲರು ಸಹರಿಸಿದ್ದಾರೆ ಎಂದರು.

ಡಿಕೆಶಿ ಅವರ ನ್ಯಾಯಾಂಗ ಬಂಧನ ಇಂದಿಗೆ ಮುಕ್ತಾಯವಾಗಿತ್ತು. ಹೀಗಾಗಿ ಇಂದು ಡಿಕೆಶಿಯನ್ನು ಇಡಿ ಕೋರ್ಟಿಗೆ ಕರೆತರಲಾಗಿತ್ತು. ಇಡಿ ಕೋರ್ಟಿನಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಅಕ್ಟೋಬರ್ 15 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ನೀಡಿದ್ದಾರೆ.

Comments

Leave a Reply

Your email address will not be published. Required fields are marked *