ಶುಭ ಮುಹೂರ್ತ ನೋಡಿ ಅಕ್ರಮದ ದಾಖಲೆ ಬಿಡುಗಡೆ ಮಾಡಿ: ಹೆಚ್‍ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ

– ಬಿಜೆಪಿ, ಜೆಡಿಎಸ್ ಪಾದಯಾತ್ರೆ ನನಗೆ ವರವಾಗಿದೆ

ಮಂಡ್ಯ: ದಾಖಲೆ ಬಿಡುಗಡೆಗೆ ತಡ ಮಾಡಬಾರದು, ಶುಭಗಳಿಗೆ, ಶುಭ ಮುಹೂರ್ತ ನೋಡಿ ಬೇಗ ಬಿಡುಗಡೆ ಮಾಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ (H.D Kumaraswamy) ವಿರುದ್ಧ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವಾಗ್ದಾಳಿ ನಡೆಸಿದ್ದಾರೆ.

ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧದ ಅಕ್ರಮದ ದಾಖಲೆ ಬಿಡುಗಡೆ ಮಾಡುವುದಾಗಿ ನೀಡಿದ್ದ ಹೆಚ್‍ಡಿಕೆ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಈ ವೇಳೆ, ಕುಮಾರಸ್ವಾಮಿ ಕುತಂತ್ರ 20 ವರ್ಷಗಳಿಂದ ನಡೆಯುತ್ತಿದೆ. ಇಡಿ, ಸಿಬಿಐ ಏನೇನೂ ಬೇಕು ಎಲ್ಲವನ್ನೂ ಜಾಲಾಡ್ತಿದ್ದಾರೆ. ಅದೇ ರೀತಿ ಹೆಚ್‍ಡಿಕೆ ಸಹ ಅದನ್ನೇ ಮಾಡ್ತಿದ್ದಾರೆ. ನನ್ನ ಬದುಕು ತೆರೆದ ಪುಸ್ತಕ, ನನಗೆ ತೊಂದರೆ ಇಲ್ಲ. ಜೆಡಿಎಸ್ ಹಾಗೂ ಬಿಜೆಪಿ ಪಾದಯಾತ್ರೆ ನನಗೆ ವರವಾಗಿದೆ. ಅವರ ಅಸೂಹೆ, ಅಕ್ರಮಗಳನ್ನ ಜನರ ಮುಂದಿಡಲು ನನಗೆ ಅವಕಾಶ ಸಿಕ್ಕಿದೆ ಎಂದಿದ್ದಾರೆ.

ಬಹಿರಂಗ ಚರ್ಚೆಗೆ ಕುಮಾರಸ್ವಾಮಿ ಆಹ್ವಾನ ವಿಚಾರವಾಗಿ, ಚಾಮುಂಡಿ ಬೆಟ್ಟಕ್ಕೆ ಬೇಡ, ಅಸೆಂಬ್ಲಿಗೆ ಬರಲಿ. ಕುಮಾರಸ್ವಾಮಿ ಅಸೆಂಬ್ಲಿಗೆ ಬರಲು ಆಗಲ್ಲ, ಅವರ ಅಣ್ಣನನ್ನ ಕಳುಹಿಸಲಿ ಎಂದು ಅವರು ಅಕ್ರೋಶ ಹೊರಹಾಕಿದ್ದಾರೆ.

ಡಿಕೆಶಿ ದಲಿತ ಕುಟುಂಬ ಹಾಳು ಮಾಡಿದ್ದಾರೆ ಎಂಬ ಹೆಚ್‍ಡಿಕೆ ಆರೋಪದ ವಿಚಾರವಾಗಿ, ಅದ್ಯಾವ ದಲಿತ ಕುಟುಂಬ ಎಂದು ಪಟ್ಟಿ ಕೊಡೋಕೆ ಹೇಳಿ. ಇವನು ಮುಖ್ಯಮಂತ್ರಿಯಾಗಿದ್ದನ್ನಲ್ಲ, ತನಿಖೆ ಮಾಡಿಸಿದ್ದಾರಲ್ಲ, ಅದ್ಯಾವ ದಲಿತ ಕುಟುಂಬ ತಂದು ನಿಲ್ಲಿಸಲಿ ಎಂದು ಅವರು ಏಕವಚನದಲ್ಲೇ ಕಿಡಿಕಾರಿದ್ದಾರೆ.

ಪೌರಾಡಳಿತ ಇಲಾಖೆಯಿಂದ 14 ಅಧಿಕಾರಿಗಳನ್ನು ಒಂದೇ ದಿನ ವರ್ಗಾವಣೆ ಮಾಡಿದ ವಿಚಾರವಾಗಿ, ಇಲಾಖೆಗಳಲ್ಲಿ ನೂರು ಜನರನ್ನು ವರ್ಗಾವಣೆ ಮಾಡಬಹುದು. ಮಂತ್ರಿಗಳಿಗೆ ವರ್ಗಾವಣೆ ಮಾಡುವ ಅವಕಾಶ ಇರುತ್ತದೆ. ಕೆಲವು ಮನವಿ ಬಂದಿರುತ್ತದೆ. ಅದಕ್ಕೆ ವರ್ಗಾವಣೆ ಮಾಡ್ತಾರೆ, ಅದು ತಪ್ಪಲ್ಲ ಎಂದಿದ್ದಾರೆ.