ಕಾಂಗ್ರೆಸ್ ಪಕ್ಷ ಧರ್ಮ ಒಡೆಯುವ ವಿಚಾರಕ್ಕೆ ಕೈ ಹಾಕಿಲ್ಲ: ಸಚಿವ ಡಿಕೆಶಿ

ಶಿವಮೊಗ್ಗ: ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರಧಾನಿಗಳು ಕಾಂಗ್ರೆಸ್ ಪಕ್ಷ ಧರ್ಮ ಒಡೆಯುವ ಕೆಲಸ ಮಾಡುತ್ತಿದೆ. ಸರ್ಕಾರ ಇಬ್ಬರು ಸಚಿವರು ಕಿತ್ತಾಡುತ್ತಿದ್ದಾರೆ. ಅಲ್ಲದೇ ಸಿಎಂ ಎಚ್‍ಡಿಕೆ ಹಾಗೂ ರೇವಣ್ಣ ಬಗ್ಗೆ ಮಾತನಾಡಿದ್ದಾರೆ. ಆದರೆ ದೊಡ್ಡ ಸ್ಥಾನದಲ್ಲಿ ಇದ್ದುಕೊಂಡು ಸಣ್ಣ ಸಣ್ಣ ವಿಚಾರಗಳನ್ನು ಪ್ರಸ್ತಾವನೆ ಮಾಡಿದ್ದು ಸರಿಯಲ್ಲ. ಅದ್ದರಿಂದ ನಾನು ಅವರಿಗೆ ನೇರವಾಗಿ ಹೇಳುತ್ತಿದ್ದು, ಕಾಂಗ್ರೆಸ್ ಪಕ್ಷ ಧರ್ಮ ಒಡೆಯುವ ವಿಚಾರಕ್ಕೆ ಕೈ ಹಾಕಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮದ ವಿಚಾರ ಕೇವಲ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿಯದ್ದು ಮಾತ್ರ ಅಲ್ಲ. ಇದು ಅಂದು ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡ ನಿರ್ಧಾರವಾಗಿದ್ದು, ಅವತ್ತು ಅಖಿಲ ಭಾರತ ವೀರಶೈವ ಮಹಾಸಭಾ ಮನಮೋಹನ್ ಸಿಂಗ್ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದನ್ನು ಅವರಿಬ್ಬರು ಮುಂದುವರಿಸಿದ್ದರು. ಆದರೆ ಆ ಪತ್ರಕ್ಕೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರು ಸಹಿ ಹಾಕಿದ್ದಾರೆ. ನಾನು ಕ್ಯಾಬಿನೆಟ್ ನಲ್ಲಿ ಸಮ್ಮತಿ ಸೂಚಿಸಿದ್ದೆ, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಒಪ್ಪಿಗೆ ಸೂಚಿಸಿದ್ದೆ. ಇದರಿಂದ ನನಗೆ ವೈಯುಕ್ತಿಕವಾಗಿ ಹಿನ್ನಡೆ ಆಯ್ತು, ಮಾಡಬಾರದಿತ್ತು ಎಂದು ಹೇಳಿದ್ದು ನಿಜ ಎಂದು ಸ್ಪಷ್ಟನೆ ನೀಡಿದರು. ಅಲ್ಲದೇ ಬೇರೆ ಯಾರು ಏನ್ ಬೇಕಾದ್ರೂ ಅಂದುಕೊಳ್ಳಲಿ ಬಿಡಿ ಎಂದರು.

ಧರ್ಮ, ಜಾತಿಯ ವಿಚಾರವನ್ನೇ ಮೋದಿ ರಾಜಕೀಯಕ್ಕೆ ಬಳಸಿಕೊಂಡಿದ್ದು ತಪ್ಪು. ಆದರೆ ಬಡ ರೈತರ ಸಮಸ್ಯೆ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಪರಿಹಾರ ಕೊಡಲು ಮನಸ್ಸಿಲ್ಲ. ನಮ್ಮ ಪಕ್ಷದ ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ, ಇಂದಿರಾಗಾಂಧಿ ಅವರು ದೇಶಕ್ಕಾಗಿ ತ್ಯಾಗ ಮಾಡಲಿಲ್ಲವಾ? ಈಗ ರಾಜಕೀಯಕ್ಕಾಗಿ ಸೈನಿಕರನ್ನು ಬಳಸಿಕೊಳುತ್ತೀರಾ? ಗುಪ್ತಚರ ವರದಿ ವಿಫಲತೆಯನ್ನು ಮರೆಮಾಚಿ ಪುಲ್ವಾಮಾ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ನಾಚಿಕೆ ಆಗಲ್ವಾ ಎಂದು ಪ್ರಶ್ನೆ ಮಾಡಿದರು.

ಕೇಂದ್ರ ಸರ್ಕಾರದಿಂದ ಎಲ್ಲಾ ಇಲಾಖೆಗಳನ್ನು ಮಿಸ್ ಯೂಸ್ ಮಾಡಲಾಗಿದೆ. ಸಿಎಜಿ ರಿಪೋರ್ಟ್ ಏನಾಯ್ತು? ರಾಜಕೀಯಕ್ಕೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿರಲ್ಲ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಎಸೆದರು. ಇದೇ ವೇಳೆ ಈಶ್ವರಪ್ಪ ಅವರ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಈಶ್ವರಪ್ಪ ಮೆಂಟಲ್ ಕೇಸ್. ಅವರ ಪಾರ್ಟಿ ಅವರೇ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದರು.

Comments

Leave a Reply

Your email address will not be published. Required fields are marked *