ಕೊನೆಗೂ ಹೋಟೆಲ್‍ಗೆ ಟ್ರಬಲ್ ಶೂಟರ್ ಎಂಟ್ರಿ

ಮುಂಬೈ: ಅತೃಪ್ತ ಶಾಸಕರಿದ್ದ ಹೋಟೆಲ್ ಪ್ರವೇಶಿಸಲು ಡಿ.ಕೆ.ಶಿವಕುಮಾರ್ ಅವರಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೂ ಇಂದು ಬೆಳಗ್ಗೆಯಿಂದ ಹೋಟೆಲ್ ಮುಂದೆಯೇ ಧರಣಿ ಕುಳಿತ್ತಿದ್ದರು. ಕೊನೆಗೂ ಹೋಟೆಲ್ ಸಿಬ್ಬಂದಿ ಡಿಕೆಶಿ ಹಠಕ್ಕೆ ಮಣಿದು ರೂಮ್ ಕೊಡಲು ನಿರ್ಧಾರ ಮಾಡಿದ್ದಾರೆ.

ಹೋಟೆಲ್ ಸಿಬ್ಬಂದಿ ಮತ್ತು ಪೊಲೀಸರು ನಡುವೆ ಮಾತುಕತೆ ನಡೆದಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಹೋಟೆಲ್‍ನಲ್ಲಿ ರೂಮ್ ಕೊಡಲು ಒಪ್ಪಿಗೆ ನೀಡಲಾಗಿದೆ. ಆದರೆ ಅತೃಪ್ತ ಶಾಸಕರ ತಂಗಿರುವ ಬಿಲ್ಡಿಂಗ್ ಬಿಟ್ಟು ಬೇರೆ ಬಿಲ್ಡಿಂಗ್‍ನಲ್ಲಿ ಡಿಕೆಶಿಗೆ ರೂಮ್ ಕೊಡಲು ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಹೋಟೆಲ್ ಅವರ ವಾದವನ್ನು ಶಿವಕುಮಾರ್ ತಳ್ಳಿ ಹಾಕಿದ್ದಾರೆ.

ನನಗೆ ಶಾಸಕರು ಇರುವ ಬಿಲ್ಡಿಂಗ್‍ನಲ್ಲೇ ರೂಮ್ ಬೇಕೇಬೇಕು ಎಂದು ಹೋಟೆಲ್ ಸಿಬ್ಬಂದಿ ಬಳಿ ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಸಿಬ್ಬಂದಿ ಡಿಕೆಶಿ ಅವರ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಡಿಕೆಶಿ ಬೇರೆ ರೂಮ್ ನೀಡುವುದರ ಬಗ್ಗೆ ಒಪ್ಪಿಗೆ ನೀಡಲಿಲ್ಲ. ಕೊನೆಗೂ ಅತೃಪ್ತ ಶಾಸಕರು ಇರುವ ಹೋಟೆಲ್ ಬಿಲ್ಡಿಂಗ್‍ನಲ್ಲಿ ಶಿವಕುಮಾರ್ ಅವರಿಗೆ ರೂಮ್ ಸಿಕ್ಕಿದೆ.

ಡಿಐಜಿ ಮನವಿ:
ಮಹಾರಾಷ್ಟ್ರ ದಕ್ಷಿಣ ವಲಯ ಡಿಐಜಿ ಮನೋಜ್ ಶರ್ಮಾ ಅವರು ಮುಂಬೈ ಹೋಟೆಲ್‍ಗೆ ಬಂದು ಡಿ.ಕೆ.ಶಿವಕುಮಾರ್ ಅವರಿಗೆ ಮನವರಿಕೆ ಮಾಡಲು ಯತ್ನಿಸಿದ್ದರು. ತುರ್ತು ಪರಿಸ್ಥಿತಿಯ ಕಾರಣ ರೂಮ್ ಬುಕ್ ಕ್ಯಾನ್ಸಲ್ ಮಾಡಲಾಗಿದೆ. ಇದರಲ್ಲಿ ಹೋಟೆಲ್ ಆಡಳಿತ ಮಂಡಳಿಯ ತಪ್ಪಿಲ್ಲ. ಯಾವುದೇ ಕಾರಣಕ್ಕೂ ಒಳ ಬಿಡಲು ಸಾದ್ಯವಿಲ್ಲ. ಇದರ ಮೇಲೆ ನಿಮ್ಮ ಇಷ್ಟ, ಯಾವುದೇ ಕಾರಣಕ್ಕೂ ನಾವು ನಿಮ್ಮನ್ನು ಒಳ ಬಿಡುವುದಿಲ್ಲ. ಹೋಟೆಲ್ ಸುತ್ತ ಮುತ್ತ 144 ಸೆಕ್ಷನ್ ಹಾಕಲಾಗಿದೆ ಎಂದು ಮನೋಜ್ ಶರ್ಮಾ ಅವರು ಡಿಕೆಶಿ ಅವರಿಗೆ ಮನವರಿಕೆ ಮಾಡಿ ಸ್ಥಳದಿಂದ ತೆರಳಿದ್ದರು. ಆದರೆ ಡಿಐಜಿ ಹೇಳಿದರೂ ಡಿ.ಕೆ.ಶಿವಕುಮಾರ್ ಸ್ಥಳವನ್ನು ಮಾತ್ರ ಬಿಟ್ಟು ಹೋಗಿರಲಿಲ್ಲ.

Comments

Leave a Reply

Your email address will not be published. Required fields are marked *