ಸುಮ್ಮನೆ ಬಿಳಿ ಬಟ್ಟೆ ತೊಟ್ಟರೆ ಲೀಡರ್ ಆಗಲ್ಲ – ಕಾರ್ಯಕರ್ತರಿಗೆ ಡಿಕೆಶಿ ರಾಜಕೀಯ ಪಾಠ

ಹುಬ್ಬಳ್ಳಿ: ಸುಮ್ಮನೆ ಬಿಳಿ ಬಟ್ಟೆ ತೊಟ್ಟರೆ ಲೀಡರ್ ಆಗಲ್ಲ. ಯಾರು ತಮ್ಮ ತಮ್ಮ ಬೂತ್‍ಗಳಲ್ಲಿ ಲೀಡ್ ತಂದು ಕೊಡುತ್ತಾರೋ ಅವರು ನಿಜವಾದ ನಾಯಕರು ಎಂದು ಕುಂದಗೋಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಚಿವ ಡಿ.ಕೆ.ಶಿವಕುಮಾರ್ ರಾಜಕೀಯ ಪಾಠವನ್ನು ಮಾಡಿದ್ದಾರೆ.

ಪ್ರಚಾರ ವೇಳೆ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಪ್ರತಿ ಮತಗಟ್ಟೆಗಳಲ್ಲಿ ಲೀಡ್ ತಂದು ಕೊಟ್ಟವರು ನನ್ನ ತರಹ ಲೀಡರ್ ಆಗುತ್ತಾರೆ. ಬಿಳಿ ಬಟ್ಟೆ ತೊಟ್ಟು ನನ್ನ ಜೊತೆ ಬಂದರೆ ನಾನು ಅವರನ್ನು ನಂಬಲ್ಲ. ಯಾರು ಏನೇ ಹೇಳಿದರು ನೀವು ಎಲ್ಲರ ಮನೆಗೆ ಹೋಗಿ ಪ್ರಚಾರ ಮಾಡಬೇಕು. ಕ್ಷೇತ್ರದಲ್ಲಿ ಕುಸುಮಾ ಶಿವಳ್ಳಿಯವರನ್ನ ಗೆಲ್ಲಿಸುವುದು ನಮ್ಮ ಜವಾಬ್ದಾರಿ ಎಂದು ಕಾರ್ಯಕರ್ತರಿಗೆ ಚುನಾವಣೆ ಉತ್ಸಾಹ ತುಂಬಿದರು.

ಬಿಜೆಪಿಯ ಸ್ಥಳೀಯ ನಾಯಕರಿಗೆ ಆಹ್ವಾನ ಕೊಡುತ್ತೇನೆ, ನಮ್ಮ ಪಕ್ಷದ ಜೊತೆಗೆ ನೀವು ಕೈ ಜೋಡಿಸಬೇಕು ಎಂದರು. ಈ ಚುನಾವಣೆ ನಡೆಯುತ್ತಿರುವುದು, ಮೋದಿಗಾಗಿ ಅಲ್ಲ. ಇಲ್ಲಿ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅಭ್ಯರ್ಥಿಗಳಲ್ಲ. ಇಲ್ಲಿ ನಡೆಯುತ್ತಿರುವುದು ಸಿ.ಎಸ್.ಶಿವಳ್ಳಿಯವರ ಚುನಾವಣೆ, ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನ ಇಟ್ಟುಕೊಂಡು ಚುನಾವಣೆ ಮಾಡುತ್ತೇವೆ. ಇವತ್ತಿನಿಂದ 18 ರವರೆಗೆ ನಮ್ಮ ಕೆಲಸ ನಡೆಯುತ್ತದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಸಿದ್ದರಾಮಯ್ಯ ನಮ್ಮ ನಾಯಕ: ಇದಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಮ್ಮ ನಾಯಕರು, ನಾವು ಅವರನ್ನು ಮೂಲೆ ಗುಂಪು ಮಾಡುವ ಮಾತೇ ಇಲ್ಲಾ. ನಾವೆಲ್ಲಾ ಸೇರಿ ಅವರ ಕೈ ಬಲಪಡಿಸುತ್ತೆವೆ. ಸರ್ಕಾರ ಸುಭದ್ರವಾಗಿದೆ ಮುಂದೆಯೂ ಇರಲಿದೆ. ರಾಜಕೀಯ ಚದುರಂಗ ಆಟದ ಬಗ್ಗೆ ಮೇ 23ರ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *