ಯಾವುದೇ ಕ್ಷಣದಲ್ಲಿ ಡಿಕೆಶಿ ಬಂಧನ ಸಾಧ್ಯತೆ- ಐಟಿ ರೇಡ್‍ನಲ್ಲಿ ಸಿಕ್ಕ ಆಸ್ತಿಪಾಸ್ತಿಯ ಮೌಲ್ಯವೆಷ್ಟು ಗೊತ್ತಾ?

ಬೆಂಗಳೂರು: ಸತತ 3ನೇ ರಾತ್ರಿ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆಯಲ್ಲಿ ಮಿಡ್‍ನೈಟ್ ಆಪರೇಷನ್ ನಡೆದಿದೆ. 4 ದಿನಗಳ ಐಟಿ ಕಾರ್ಯಾಚರಣೆಯಲ್ಲಿ ಸಿಕ್ಕಿದ್ದೇನು? ಐಟಿ ಲ್ಯಾಪ್‍ಟಾಪ್ ರಹಸ್ಯವೇನು? ಡಿಕೆಶಿ ಆಪ್ತರು ಹಾಗೂ ಸಂಬಂಧಿಕರ ಮನೆಗಳಲ್ಲಿ ಪತ್ತೆಯಾದ ಆಸ್ತಿಪಾಸ್ತಿ ಎಷ್ಟು ಎಂಬುದರ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

ಹೌದು. ಐಟಿ ದಾಳಿ ವೇಳೆ ಪತ್ತೆಯಾಗಿದ್ದು 600 ಕೋಟಿಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿಗಳ ದಾಖಲೆ. ಬೆಂಗಳೂರು, ಮೈಸೂರು, ದೆಹಲಿ ಸೇರಿ ವಿವಿಧೆಡೆ ವಶಪಡಿಸಿಕೊಂಡ ದಾಖಲೆಗಳನ್ನ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಥೈಲ್ಯಾಂಡ್, ದಕ್ಷಿಣ ಕೊರಿಯಾ, ಸಿಂಗಪೂರ್, ಕತಾರ್ ಹಾಗೂ ಲಂಡನ್‍ನಲ್ಲೂ ಕೂಡ ಡಿಕೆಶಿ ಹೂಡಿಕೆ ಮಾಡಿದ್ದಾರೆ.

ಬಹುತೇಕ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪವರ್ ಮಿನಿಸ್ಟರ್ ಹಣ ತೊಡಗಿಸಿದ್ದಾರೆ. ಬೇನಾಮಿ ಹೆಸರಿನಲ್ಲಿ ಹೂಡಿಕೆ ಮಾಡಿರುವ ಸಂಬಂಧ ದಾಖಲೆ ಪತ್ರಗಳು ಐ.ಟಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಹೀಗಾಗಿಯೇ ರಾತ್ರಿಯಿಡೀ ಡಿಕೆ ಶಿವಕುಮಾರ್‍ರನ್ನು ಐಟಿ ಪಡೆ ವಿಚಾರಣೆಗೆ ಒಳಪಡಿಸಿದೆ.

ಅನುಮಾನಾಸ್ಪದ ಉದ್ಯಮಗಳು ಮತ್ತು ಬ್ಯಾಂಕ್ ಖಾತೆಗಳ ಸ್ಥಗಿತಕ್ಕೆ ಐಟಿ ಇಲಾಖೆ ಸೂಚನೆ ನೀಡುವ ಸಾಧ್ಯತೆಯಿದೆ. ಡಿಕೆಶಿ ಪ್ರಕರಣವನ್ನು ಶೀಘ್ರವೇ ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲು ಐಟಿ ತಯಾರಿ ನಡೆಸಿದೆ ಎಂದು ಹೇಳಲಾಗಿದೆ. ಜಾರಿ ನಿರ್ದೇಶನಾಲಯ ಕೂಡ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಈಗಾಗಲೇ ಬೆಂಗಳೂರಿನ ಕೆಲವು ಹಿರಿಯ ವಕೀಲರನ್ನು ಜಾರಿ ನಿರ್ದೇಶನಾಲಯ ಸಂಪರ್ಕಿಸಿದೆ ಎನ್ನಲಾಗುತ್ತಿದೆ. ಜಾರಿ ನಿರ್ದೇಶನಾಲಯಕ್ಕೆ ಪ್ರಕರಣ ವರ್ಗಾವಣೆಗೊಂಡರೆ ಯಾವುದೇ ಕ್ಷಣದಲ್ಲಿ ಡಿಕೆಶಿ ಬಂಧನವಾಗೋ ಸಾಧ್ಯತೆಯಿದೆ.

Comments

Leave a Reply

Your email address will not be published. Required fields are marked *