ಬಿಜೆಪಿ ಕುಮ್ಮಕ್ಕಿನಿಂದ ಪೊಲೀಸರು ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ: ಶಾಸಕ ಬಾಲಕೃಷ್ಣ

ಮುಂಬೈ: ಬಿಜೆಪಿಯವರ ಕುಮ್ಮಕ್ಕಿನಿಂದ ಪೊಲೀಸರು ಹೋಟೆಲ್ ಒಳಗೆ ಬಿಡದೇ ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ದೂರವಾಣಿಯಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, ಡಿ.ಕೆ ಶಿವಕುಮಾರ್ ಅವರನ್ನು ಮುಂದೆ ಕರೆದುಕೊಂಡು ಹೋಗುತ್ತಿದ್ದಾರೆ. ನಮ್ಮ ವಾಹನದ ಮುಂದೆ ಪೊಲೀಸ್ ವಾಹನ ಇದೆ. ಶಿವಕುಮಾರ್ ಎಲ್ಲಿ ಇರುತ್ತಾರೋ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾವು ಸುಮಾರು 6 ಗಂಟೆಗಳ ಕಾಲ ನಿರಂತರವಾಗಿ ಧರಣಿ ಕುಳಿತ್ತಿದ್ದೆವು. ಬಿಜೆಪಿ ಅವರ ಕುಮ್ಮಕ್ಕಿನಿಂದ ಪೊಲೀಸರು ಹೋಟೆಲ್ ಒಳಗೆ ಬಿಡದೇ ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಮಂಗಳವಾರ ಕೂಡ ಬಿಜೆಪಿಯ ರಾಜ್ಯ ನಾಯಕರು ಶಾಸಕರನ್ನು ಸಂಪರ್ಕಿಸಿದ್ದಾರೆ. ನಾವು ಖಾಸಗಿಯಾಗಿ ವಾಸ್ತವ ಮಾಡಲು ರೂಂ ಬುಕ್ ಮಾಡಿದ್ದೇವೆ. ಆದರೆ ಬಿಜೆಪಿಯವರು ದುರುದ್ದೇಶದಿಂದ ನಮ್ಮ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಸಿದ್ದರು. ಪೊಲೀಸರು ಮೊದಲು ಪಾಸಿಟಿವ್ ಆಗಿದ್ದರು. ಬಳಿಕ ದೂರವಾಣಿ ಕರೆಗಳು ಬಂದ ನಂತರ ಹೋಟೆಲ್ ಮಾಲೀಕರನ್ನು ಹೊರಗಡೆ ಕರೆಸಿ ರೂಂ ಖಾಲಿ ಇಲ್ಲ ಎಂದು ಕ್ಯಾನ್ಸಲ್ ಪತ್ರ ಬರೆಸಿ ನಮಗೆ ನೀಡಿದರು ಎಂದು ದೂರಿದರು.

ನಮ್ಮ ರಾಜ್ಯದ ವಿರೋಧ ಪಕ್ಷದ ನಾಯಕರು ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿ ಈ ರೀತಿ ಮಾಡಿಸಿದ್ದಾರೆ. ಪೊಲೀಸರು ಮೊದಲು ನಮಗೆ ಗೌರವ ನೀಡಿ ನೋಡಿಕೊಂಡರು. ಬಳಿಕ ಡಿಕೆ ಶಿವಕುಮಾರ್ ಅವರನ್ನು ಬಲವಂತವಾಗಿ ವಾಹನದಲ್ಲಿ ಹತ್ತಿಸಿಕೊಂಡು ಹೋಗಿದ್ದಾರೆ. ಅವರನ್ನು ಕರೆದುಕೊಂಡು ಹೋದ ಬಳಿಕ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

ನಮ್ಮ ರಾಜ್ಯದ ಇಬ್ಬರು ಮಂತ್ರಿಗಳು ಹಾಗೂ ಇಬ್ಬರು ಶಾಸಕರು ಕರ್ನಾಟಕದಿಂದ ಬಂದಿದ್ದಾರೆ ಎಂದು ಮಹಾರಾಷ್ಟ್ರದ ಹಲವು ನಾಯಕರು ನಮಗೆ ಸಹಕಾರ ನೀಡಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಮಾಡುವುದು ನಮ್ಮ ಹಕ್ಕು. ನಾವು ಯಾರಿಗೂ ದೌರ್ಜನ್ಯ ಹಾಗೂ ಒತ್ತಡವನ್ನು ನೀಡಿಲ್ಲ. ಶಾಸಕರನ್ನು ಸ್ನೇಹದಿಂದ ಮಾತನಾಡಬೇಕು ಎಂದು ನಮ್ಮ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲಿಗೆ ಬಂದಿದ್ದೇವೆ. ಪ್ರಜಾತಂತ್ರಕ್ಕೆ ವಿರುದ್ಧವಾಗಿ ಮುಂಬೈ ಆಡಳಿತ ನಡೆದುಕೊಳ್ಳುತ್ತಿದೆ. ನಾನು ಇದನ್ನು ಖಂಡಿಸುತ್ತೇನೆ ಎಂದು ಬಾಲಕೃಷ್ಣ ತಿಳಿಸಿದರು.

Comments

Leave a Reply

Your email address will not be published. Required fields are marked *