ಇಡಿ ಬಲೆಯಲ್ಲಿ ಬಂಡೆ-ಎಐಸಿಸಿ ನಾಯಕರಿಗೆ ಶುರುವಾಯ್ತಾ ಭೀತಿ!

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು ಕಳೆದ ಹತ್ತು ದಿನಗಳಿಂದ ಇಡಿ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಕಸ್ಟಡಿ ವಿಸ್ತರಣೆ ಆಗಿದೆ. ಸೆಪ್ಟೆಂಬರ್ 17 ರ ವರೆಗೂ ಕಸ್ಟಡಿ ವಿಸ್ತರಣೆ ಆಗಿದ್ದು, ಇದು ಹಲವರಲ್ಲಿ ಭೀತಿ ಸೃಷ್ಠಿಸಿದೆ. ಕಳೆದ ಹತ್ತು ದಿನಗಳ ವಿಚಾರಣೆಯಲ್ಲಿ ಡಿ.ಕೆ ಶಿವಕುಮಾರ್ ಆಪ್ತರಾಗಿದ್ದ ಆಂಜನೇಯ, ಸುನಿಲ್ ಶರ್ಮಾ, ಸಚಿನ್ ನಾರಯಣ್ ವಿಚಾರಣೆ ನಡೆಸಿದ್ದರು. ಇಷ್ಟು ಮಾತ್ರವಲ್ಲದೇ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಅವರನ್ನು ಇಡಿ ಅಧಿಕಾರಿಗಳು ಕರೆಸಿ ವಿಚಾರಣೆ ಒಳಪಡಿಸಿದ್ದರು.

ಡಿ.ಕೆ ಶಿವಕುಮಾರ್ ಕುಟುಂಬದ ವಹಿವಾಟುಗಳ ಮೇಲಿನ ಗಮನ ಇಟ್ಟಿರುವ ಇಡಿ ಸಂಪೂರ್ಣ ಮಾಹಿತಿ ಕಲೆಹಾಕಿಕೊಂಡು ವಿಚಾರಣೆ ಆರಂಭಿಸಿದೆ. ಅದರ ಮೊದಲ ಭಾಗವಾಗಿ ಪುತ್ರಿ ಐಶ್ವರ್ಯ ವಿಚಾರಣೆ ನಡೆಸಿತ್ತು. 108 ಕೋಟಿ ರೂ. ಎಲ್ಲಿಂದ ಬಂತು ಅಂತಾ ಸಾಲು ಸಾಲು ಪ್ರಶ್ನೆ ಕೇಳಿತ್ತು. ಈಗ ಡಿ.ಕೆ ಶಿವಕುಮಾರ್ ಕಸ್ಟಡಿ ವಿಚಾರಣೆ ಆದ ಬಳಿಕ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಹಾಗೂ ತಾಯಿ ಗೌರಮ್ಮ ಅವರಿಗೆ ಸಮನ್ಸ್ ನೀಡುವ ಸಾಧ್ಯತೆ ಇದೆ.

ಗೌರಮ್ಮ ಐಶ್ವರ್ಯ ಹೆಸರಿಗೆ ಒಟ್ಟು ಆರು ಎಕರೆ ಜಮೀನು ಗಿಫ್ಟ್ ಡೀಡ್ ಮಾಡಿದ್ದಾರೆ. ಮೂರು ಕೋಟಿ ಹಣ ವರ್ಗಾವಣೆ ಮಾಡಿದ್ದಾರೆ. ಅಲ್ಲದೇ ಬೆಂಗಳೂರು ಸುತ್ತ ಮುತ್ತ ಸಾಕಷ್ಟು ಆಸ್ತಿ ಮಾಡಿದ್ದು ಕೋಟ್ಯಂತರ ರೂಪಾಯಿ ಕೃಷಿ ಆದಾಯ ತೋರಿಸಿದ್ದಾರೆ. ಡಿಕೆ ಪತ್ನಿ ಉಷಾ ಅವರ ಹೆಸರಿನಲ್ಲಿ ಸಾಕಷ್ಟು ಆಸ್ತಿ ಖರೀದಿಯಾಗಿದ್ದು, ಉಷಾ ಅವರ ಹೆಸರಿನ ಖಾತೆಗಳ ಮೂಲಕ ಡಿ.ಕೆ ಶಿವಕುಮಾರ್ ವ್ಯವಹಾರಗಳನ್ನ ಮಾಡಿದ್ದಾರೆ ಎಂಬುದು ಇಡಿ ಅಧಿಕಾರಿಗಳ ಅನುಮಾನ ಹೀಗಾಗಿ ತಾಯಿ ಗೌರಮ್ಮ, ಪತ್ನಿ ಉಷಾ ಅವರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಬಹುದು ಎನ್ನಲಾಗಿದೆ.

ಡಿ.ಕೆ ಶಿವಕುಮಾರ್ ಎಐಸಿಸಿ ನಾಯಕರಿಗೆ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಅನ್ನೋ ಆರೋಪ ಇದೆ. ಹಿಂದೆ ಐಟಿ ದಾಳಿ ವೇಳೆ ಡೈರಿ ಸಿಕ್ಕಿದ್ದು ಇದರಲ್ಲಿ ಹೈಕಮಾಂಡ್ ಗೆ ಹಣ ಸಂದಾಯ ಆಗಿದ್ದ ಬಗ್ಗೆ ಕೀ ವರ್ಡ್ ಬಳಸಲಾಗಿತ್ತು ಎನ್ನುವ ಆರೋಪ ಇದೆ. ಎಐಸಿಸಿಗೆ ಹಣ ಕಳುಹಿಸಿದ ಬಗ್ಗೆ ಮಾಹಿತಿ ಇಡಿಗೆ ಸಿಕ್ಕಿದ್ದು ವಿಜಯ್ ಮುಳಗುಂದ್ ಎನ್ನುವರು ಮೂಲಕ ಒಮ್ಮೆ 3, ಇನ್ನೊಮ್ಮೆ 2 ಕೋಟಿ ರೂ 2017 ರಲ್ಲಿ ವರ್ಗಾವಣೆ ಆಗಿದೆ ಎನ್ನುವುದು ಇಡಿ ಅಧಿಕಾರಿಗಳ ಆರೋಪ. ಈ ಹಿನ್ನಲೆ ಎಐಸಿಸಿ ಸಿಬ್ಬಂದಿ, ಪ್ರಮುಖ ನಾಯಕರಿಗೆ ಸಮನ್ಸ್ ನೀಡುವ ಸಾಧ್ಯತೆ ಅಲ್ಲದೇ ವಿಜಯ್ ಮುಳಗುಂದ್ ಗೂ ಸಮನ್ಸ್ ನೀಡುವ ಸಾಧ್ಯತೆ ಇದೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

Comments

Leave a Reply

Your email address will not be published. Required fields are marked *