ಕನಕಪುರದ ಬಂಡೆಗೆ ಇಂದು ಸುಪ್ರೀಂ ಪರೀಕ್ಷೆ

ನವದೆಹಲಿ: ದೆಹಲಿ ಹೈಕೋರ್ಟ್ ನಿಂದ ಜಾಮೀನು ಪಡೆದಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಂದು ಸುಪ್ರೀಂಕೋರ್ಟ್ ನಲ್ಲಿ ಮತ್ತೊಂದು ಪರೀಕ್ಷೆ ಎದುರಿಸಲಿದ್ದಾರೆ. ಇಡಿ ಸಲ್ಲಿಸಿರುವ ಮೇಲ್ಮನವಿಯನ್ನು ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

ಅಕ್ರಮ ಹಣ ವರ್ಗಾವಣೆ ಮತ್ತು ಬೇನಾಮಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಾಮೀನು ಪಡೆದು ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ  ಇಂದು ಮಹತ್ವದ ದಿನ. ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದನ್ನ ಪ್ರಶ್ನಿಸಿ ಇಡಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಮತ್ತು ಇಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡುವಂತೆ ಡಿ.ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ನ್ಯಾ. ಆರ್.ಎಫ್.ನಾರಿಮನ್ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಈ ವಿಚಾರಣೆ ನಡೆಯಲಿದೆ.

ದೆಹಲಿ ಹೈಕೋರ್ಟ್ ನಲ್ಲಿ ಇಡಿ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ ನಟರಾಜ್, ಡಿ.ಕೆ ಶಿವಕುಮಾರ್ ಒಬ್ಬ ಪ್ರಭಾವಿ ವ್ಯಕ್ತಿ, ಶಾಸಕ, ಮಾಜಿ ಸಚಿವರಾಗಿದ್ದವರು. ಪ್ರಕರಣ ಇನ್ನು ತನಿಖಾ ಹಂತದಲ್ಲಿರುವ ಕಾರಣ ಸಾಕ್ಷಿ ನಾಶ ಮಾಡುವ ಸಾಧ್ಯತೆಗಳಿದ್ದು, ಐಟಿ ವಿಚಾರಣೆ ವೇಳೆ ಇದು ಸಾಬೀತಾಗಿದೆ. ಅಲ್ಲದೇ ದೇಶವನ್ನು ತೊರೆಯುವ ಸಾಧ್ಯತೆಯೂ ಇದೆ. ಪ್ರಕರಣ ಸಾಕಷ್ಟು ಆಳವಾಗಿ ತನಿಖೆ ಆಗಬೇಕಿದ್ದು ಡಿ.ಕೆ ಶಿವಕುಮಾರ್ ಜೈಲಿಂದ ಹೊರಗಿದ್ದಲ್ಲಿ ತನಿಖೆಗೆ ತೊಂದರೆ ಆಗಬಹುದು ಅಂತಾ ಆರೋಪಿಸಿದ್ದರು.

ಪ್ರತಿವಾದ ಮಂಡಿಸಿದ್ದ ಡಿ.ಕೆ.ಶಿವಕುಮಾರ್ ಪರ ವಕೀಲ ಅಭಿಷೇಕ ಮನುಸಿಂಘ್ವಿ, ಐವತ್ತು ದಿನಗಳ ಕಾಲ ಜೈಲಿನಲ್ಲಿ ಇಡಲಾಗಿದೆ. ಇನ್ನು ವಿಚಾರಣೆ ನಡೆಸುವ ಅಗತ್ಯ ಇಲ್ಲ. ಆರೋಗ್ಯ ದೃಷ್ಟಿಯಿಂದ ಜಾಮೀನು ನೀಡಬೇಕು. ಜಾಮೀನಿಗಾಗಿ ಯಾವುದೇ ಕಂಡಿಷನ್ ಫಾಲೋ ಮಾಡಲು ಸಿದ್ಧ ಅಲ್ಲದೇ ತನಿಖೆಗೆ ಪೂರ್ಣ ಪ್ರಮಾಣದ ಸಹಕಾರ ನೀಡುವ ಭರವಸೆ ನೀಡಿದ್ದರು.

ವಾದ ಪ್ರತಿ ವಾದ ಆಲಿಸಿದ ದೆಹಲಿ ಹೈಕೋರ್ಟ್ ನ ನ್ಯಾ. ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠ ಆರೋಗ್ಯದ ಕಾರಣಗಳನ್ನು ಆಧರಿಸಿ ಜಾಮೀನು ನೀಡಿತ್ತು. ಅಲ್ಲದೇ ತನಿಖೆಗೆ ಸಹಕರಿಸಬೇಕು ವಿದೇಶಕ್ಕೆ ತೆರಳುವ ಅನಿವಾರ್ಯತೆ ಬಂದರೆ ಮೊದಲು ಕೋರ್ಟ್ ಗಮನಕ್ಕೆ ತರಬೇಕು ಎಂದು ಸೂಚಿಸಿ ಷರತ್ತು ಬದ್ದ ಜಾಮೀನು ನೀಡಿತ್ತು.

ಡಿಕೆ ಶಿವಕುಮಾರ್ ಅವರಿಗೆ ಜಾಮೀನು ನೀಡಿದ ದೆಹಲಿ ಹೈ ಕೋರ್ಟ್ ಈ ಆದೇಶ ಪ್ರಶ್ನಿಸಿ ಇಡಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸಿದ್ರೆ, ಇಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡುವಂತೆ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ್ದರು. ಈ ಎರಡು ಅರ್ಜಿಗಳನ್ನು ಒಗ್ಗೂಡಿಸಿರುವ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದ್ದು ಡಿ.ಕೆ ಶಿವಕುಮಾರ್ ಹೊರಗಿರಬೇಕಾ ಅಥಾವ ವಾಪಸ್ ಜೈಲಿಗೆ ಹೋಗಬೇಕಾ ಅನ್ನೋದನ್ನ ನಿರ್ಧರಿಸಲಿದ್ದು ಸುಪ್ರೀಂಕೋರ್ಟ್ ವಿಚಾರಣೆ ಕುತೂಹಲ ಮೂಡಿಸಿದೆ.

Comments

Leave a Reply

Your email address will not be published. Required fields are marked *