ಇಡಿಯಿಂದ ಡಿಕೆ ಶಿವಕುಮಾರ್ ಅರೆಸ್ಟ್

ನವದೆಹಲಿ: ದೆಹಲಿ ಫ್ಲ್ಯಾಟ್‍ನಲ್ಲಿ ಪತ್ತೆಯಾದ ದಾಖಲೆ ಇಲ್ಲದ 8.59 ಕೋಟಿ ರೂ. ಹಣದ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಸತತ ನಾಲ್ಕನೇ ದಿನವೂ ಮಾಜಿ ಸಚಿವ ಡಿಕೆ ಶಿವಕುಮಾರ್ ವಿಚಾರಣೆ ನಡೆಯಿತು. ಬಳಿಕ ಅಕ್ರಮ ಹಣಕಾಸು ವ್ಯವಹಾರಗಳ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿ ಡಿಕೆ ಶಿವಕುಮಾರ್ ಅವರನ್ನು ಇಡಿ ಬಂಧಿಸಿದೆ.

ಇಂದು ಸಂಜೆ ಈ ಪ್ರಕರಣದ ಸಂಬಂಧ ಮತ್ತಷ್ಟು ವಿಚಾರಣೆ ನಡೆಸುವ ಹಿನ್ನೆಲೆಯಲ್ಲಿ ಶಿವಕುಮಾರ್ ಅವರನ್ನು ಬಂಧಿಸಿದೆ. ಇವತ್ತು ಮಧ್ಯಾಹ್ನ 12 ಗಂಟೆಗೆ ಕಡತ ತುಂಬಿದ 2 ಬ್ಯಾಗ್‍ಗಳೊಂದಿಗೆ ಅಧಿಕಾರಿಗಳು ಹಾಜರಾದ್ರು. ನಿನ್ನೆ ಮೊನ್ನೆ ರೀತಿ ಮಧ್ಯಾಹ್ನ ಊಟಕ್ಕೆ ಡಿಕೆಶಿಯನ್ನು ಹೊರಗೆ ಬಿಡಲಿಲ್ಲ.

ಈ ನಡುವೆ, ನಿರೀಕ್ಷಣಾ ಜಾಮೀನು ಸಲ್ಲಿಸುವ ನಿರ್ಧಾರದಿಂದ ಸದ್ಯಕ್ಕೆ ಡಿಕೆ ಶಿವಕುಮಾರ್ ಹಿಂದೆ ಸರಿದಿದ್ದಾರೆ. ಡಿಕೆಶಿ ಹೊರತುಪಡಿಸಿ ಉಳಿದವರು, ಸಮನ್ಸ್ ರದ್ದು ಕೋರಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಆದ್ರೆ ತುರ್ತು ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ. ವಿಚಾರಣೆ ನಡೆಯುತ್ತಾ ಇರೋವಾಗ ತುರ್ತು ವಿಚಾರಣೆ ಅಗತ್ಯ ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?
2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

Comments

Leave a Reply

Your email address will not be published. Required fields are marked *