17 ವರ್ಷದ ಯುವಕನ ಮೇಲೆ ವಿಚ್ಛೇದಿತ ಮಹಿಳೆಯಿಂದ ಲೈಂಗಿಕ ದೌರ್ಜನ್ಯ

ಪಣಜಿ: 17 ವರ್ಷದ ಯುವಕನ ಮೇಲೆ ಮಹಿಳೆಯೊಬ್ಬಳು ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಕೇಳಿಬಂದಿದ್ದು, ಆಕೆಯ ವಿರುದ್ಧ ಗೋವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತನ್ನ ಮನೆಯಲ್ಲಿ ವಾಸಿಸುತ್ತಿದ್ದ ಯುವಕನ ಮೇಲೆ ಮಹಿಳೆ ಲೈಂಗಿಕ ದೌರ್ಜನ್ಯವೆಸಗಿದ್ದಾಳೆಂದು ಆರೋಪಿಸಲಾಗಿದೆ. ಯುವಕನ ಪೋಷಕರು ಇದೇ ವಾರ ಈ ಬಗ್ಗೆ ದೂರು ದಾಖಲಿಸಿದ್ದಾರೆ. 29 ವರ್ಷದ ಮಹಿಳೆ ಜೂನ್ 7 ರಿಂದ ಸೆಪ್ಟೆಂಬರ್ 11ರ ನಡುವೆ ಯುವಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಮಾಪೂಸಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ತುಷಾರ್ ಹೇಳಿದ್ದಾರೆ.

ಯುವಕ ಮಾಪೂಸಾದ ಪೆಟ್ರೋಲ್ ಬಂಕ್‍ವೊಂದರಲ್ಲಿ ಕೆಲಸ ಮಾಡಿಕೊಂಡು ಮಹಿಳೆಯ ಮನೆಯಲ್ಲಿ ವಾಸವಿದ್ದ. ಮಹಿಳೆ ವಿಚ್ಛೇದಿತಳಾಗಿದ್ದು ತನ್ನ ಮೂವರು ಮಕ್ಕಳೊಂದಿಗೆ ವಾಸವಿದ್ದಳು ಎಂದು ವರದಿಯಾಗಿದೆ.

ಕೆಲವು ದಿನಗಳ ಹಿಂದೆ ಯುವಕ ತನ್ನ ಮನೆಗೆ ಹಿಂದಿರುಗಿದ್ದು, ಅಸಹಜವಾಗಿ ವರ್ತಿಸುತ್ತಿದ್ದ. ನಂತರ ಆತನನ್ನು ಇನ್ಸ್‍ಟಿಟ್ಯೂಟ್ ಆಫ್ ಸೈಕಿಯಾಟ್ರಿ ಅಂಡ್ ಹ್ಯೂಮನ್ ಬಿಹೇವಿಯರ್‍ಗೆ ರವಾನಿಸಲಾಗಿತ್ತು. ಕೌನ್ಸಿಲಿಂಗ್ ವೇಳೆ ಯುವಕ ತನ್ನ ಮೇಲೆ ಮಹಿಳೆ ಲೈಂಗಿಕ ದೌರ್ಜನ್ಯವೆಸಗಿರುವುದನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮಾಪೂಸಾ ಪೊಲೀಸರು ಬುಧವಾರದಂದು ಪೋಕ್ಸೋ ಕಾಯ್ದೆ ಹಾಗೂ ಗೋವಾ ಮಕ್ಕಳ ಕಾಯ್ದೆಯಡಿ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಗೆ ಗುರುವಾರದಂದು ವಿಚಾರಣೆಗೆ ಬರುವಂತೆ ಕರೆಯಲಾಗಿದ್ದು, ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಆಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *