ಸುಳ್ಳು ಆರೋಪ ಮಾಡಿದ್ರೆ ದಾಖಲೆ ಸಮೇತ ನಿಮ್ಮ ಅವ್ಯವಹಾರಗಳನ್ನ ಬಯಲು ಮಾಡ್ತೇನೆ: ಸುಧಾಕರ್

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಕಾಂಗ್ರೆಸ್ ಪಕ್ಷದ ಶಾಸಕ ವಿ.ಮುನಿಯಪ್ಪ ಅವರು ನಿನ್ನೆ ಶಾಸಕ ಸುಧಾಕರ್ ಅವರ ಮೇಲೆ ಮಾಡಿದ್ದ ಆರೋಪಗಳಿಗೆ ಅನರ್ಹ ಶಾಸಕ ಸುಧಾಕರ್ ತಿರುಗೇಟು ನೀಡಿದ್ದು, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದರೆ ನಿಮ್ಮ ಅವ್ಯವಹಾರಗಳನ್ನು ದಾಖಲೆ ಸಮೇತ ಬಯಲು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿ.ಮುನಿಯಪ್ಪ ಅವರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನ ಮಾಡಿದ್ದಾರೆ. ಆದರೆ ನಾನು ರಾಜಕಾರಣಕ್ಕೂ ಬರುವ ಮುನ್ನವೇ ಆರ್ಥಿಕವಾಗಿ ಸದೃಢನಾಗಿದ್ದೇನೆ. ಕೋಟ್ಯಾಂತರ ರೂಪಾಯಿ ಸಾಲ ಮಾಡಿ ನಾನು ವಿದ್ಯಾಸಂಸ್ಥೆ ಕಟ್ಟಿರುತ್ತೇನೆ. 20 ವರ್ಷದಿಂದ ನಾನು ಆದಾಯ ತೆರಿಗೆ ಪಾವತಿಸುತ್ತಿದ್ದು ಪಾರದರ್ಶಕವಾಗಿದೆ. ಆದರೆ ರಾಜಕಾರಣಕ್ಕೆ ಬಂದ ಮೇಲೆ ಮುನಿಯಪ್ಪ ಅವರು ಯಾವ ಮಟ್ಟಕ್ಕೆ ಬೆಳೆದಿದ್ದಾರೆ ಎಂಬುದು ಗೊತ್ತು ಎಂದಿದ್ದಾರೆ.

ಇದೇ  ವೇಳೆ ವಿ.ಮುನಿಯಪ್ಪ ಅವರ ವಿರುದ್ಧವೂ ಆರೋಪ ಮಾಡಿದರುವ ಸುಧಾಕರ್ ಅವರು, ಬೆಂಗಳೂರಿನಲ್ಲಿ ನಿಮಗೆ ಎಷ್ಟು ಕಟ್ಟಡಗಳಿವೆ ಎಷ್ಟು ಬಾಡಿಗೆ ಬರುತ್ತಿದೆ. ವಿದ್ಯಾಸಂಸ್ಥೆಗಳ ವಹಿವಾಟು ಎಷ್ಟರ ಮಟ್ಟಿಗೆ ಅಭಿವೃದ್ಧಿ ಪಡಿಸಿಕೊಂಡಿದ್ದೀರಿ ಎಂಬುವುದು ನನಗೆ ಅರಿವಿದೆ. ನನ್ನ ಶಿಕ್ಷಣದ ಬಗ್ಗೆ ನಿಮಗೇ ಸಂದೇಹಗಳಿದ್ದಾರೆ ಆರ್ ಟಿಐ ಹಾಕಿ ನನ್ನ ವಿದ್ಯಾಭ್ಯಾಸದ ಮಾಹಿತಿ ಪಡೆದುಕೊಳ್ಳಿ. ರಾಜಕೀಯಕ್ಕೆ ಬಂದ ನಂತರ ನನ್ನ ವಹಿವಾಟು ಎಷ್ಟು, ನಿಮ್ಮ ವಹಿವಾಟು ಎಷ್ಟು ಎಂಬ ಮಾಹಿತಿ ಪಡೆಯಿರಿ ಎಂದು ಸವಾಲು ಎಸೆದಿದ್ದಾರೆ.

ಮಾನ್ಯ ವಿ.ಮುನಿಯಪ್ಪ ಅವರು ಗಣಿ ಇಲಾಖೆಯ ಮಂತ್ರಿಗಳಾಗಿದ್ದಾಗ ಏನೇನು ಅವ್ಯವಾಹಾರ ಮಾಡಿದ್ದೀರಿ. ಅಧಿಕಾರಿಗಳ ವರ್ಗಾವಣೆಯಲ್ಲಿ ಯಾವ ರೀತಿ ದಂಧೆ ಮಾಡಿದ್ದೀರಿ ಗೊತ್ತಿದೆ. ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನ ಮಾಡಿದಲ್ಲಿ ನಾನು ಸಹಿಸುವುದಿಲ್ಲ. ದಾಖಲೆಗಳ ಸಮೇತ ನಿಮ್ಮ ಅವ್ಯವಹಾರಗಳನ್ನ ಬಯಲು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇದನ್ನು ಓದಿ: ಸುಧಾಕರ್‌ಗೆ ಕೋಟ್ಯಂತರ ಹಣ ಎಲ್ಲಿಂದ ಬರುತ್ತೆ – ವಿ ಮುನಿಯಪ್ಪ ಕಿಡಿ

ನಿನ್ನೆಯಷ್ಟೇ ಅನರ್ಹ ಶಾಸಕ ಸುಧಾಕರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ, ಅವರು ಸುಧಾಕರ್ ಎಂಬಿಬಿಎಸ್ ಮಾಡಿರುವುದು ಅನುಮಾನ ಎಂದಿದ್ದರು. ಅಲ್ಲದೇ ಸುಧಾಕರ್ ಅವರಿಗೆ ಕೋಟ್ಯಾಂತರ ರೂಪಾಯಿ ಎಲ್ಲಿಂದ ಬರುತ್ತೆ. ಸುಧಾಕರ್ ಕುಟುಂಬ ಗಣಿಗಾರಿಕೆಯಲ್ಲಿ ತೊಡಗಿದ್ದು, ಗಣಿಗಾರಿಕೆ ಮಡುವ ಪ್ರತಿಯೊಬ್ಬರು ಸುಧಾಕರ್ ಗೆ ಪ್ರತಿ ತಿಂಗಳು ಇಂತಿಷ್ಟು ಅಂತ ಹಣ ಅವರಿಗೆ ನೀಡಬೇಕೆಂದು ಆರೋಪ ಮಾಡಿದ್ದರು.

Comments

Leave a Reply

Your email address will not be published. Required fields are marked *