ಕಾಂಗ್ರೆಸ್ ಮನೆಗೆ ಬಂದು ನಮ್ಮ ವಿರುದ್ಧವೇ ಮಾತನಾಡ್ತಾರೆ – ಸಿದ್ದರಾಮಯ್ಯ ವಿರುದ್ಧ ಎಂಟಿಬಿ ಕಿಡಿ

ಕೋಲಾರ: ಇವರ ಆಡಳಿತಾವಧಿಯಲ್ಲಿ ಎಷ್ಟು ಪ್ರಮಾಣಿಕವಾಗಿ ಆಡಳಿತ ಮಾಡಿದ್ದಾರೆಂದು ನಾನು ಹೇಳುತ್ತೇನೆ. ಇವರು ಎಷ್ಟು ಪ್ರಾಮಾಣಿಕರೆಂದು ಯಾವುದೇ ಮಾಧ್ಯಮ ಅಥವಾ ದೇವಸ್ಥಾನದ ಎದುರು ಹೇಳಲು ನಾನು ಸಿದ್ಧ. ತಾಕತ್ ಇದ್ದರೆ ಇವರು ಬಂದು ನನ್ನ ಬಗ್ಗೆ ಹೇಳಲಿ. ಮೈತ್ರಿ ಸರ್ಕಾರ ಬೀಳಲು ದೇವೇಗೌಡ ಹಾಗೂ ಸಿದ್ದರಾಮಯ್ಯ ಇಬ್ಬರೂ ಕಾರಣ ಎಂದು ಹೇಳುವ ಮೂಲಕ ಮೈತ್ರಿ ನಾಯಕರಿಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಹಿರಂಗ ಸವಾಲು ಹಾಕಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ನಾವು ರಾಜಿನಾಮೆ ನೀಡಿ ಹೋಗಿದ್ದಕ್ಕೆ ಕಾರಣ ಮುಖಂಡರು ಕೈಗೊಂಡ ನಿರ್ಧಾರಗಳು. ನಾವು ಮೂಲ ಕಾಂಗ್ರೆಸ್ಸಿಗರು, ನಮ್ಮ ಬಗ್ಗೆ ಮಾತನಾಡುವವರು ಅಧಿಕಾರಕ್ಕಾಗಿ ಕಾಂಗ್ರೆಸ್ಸಿಗೆ ಬಂದವರು. ನಾವು ಕಟ್ಟಿದ ಕಾಂಗ್ರೇಸ್ ಮನೆಯಲ್ಲಿ ಇವರು ಸಂಸಾರ ಮಾಡುತ್ತಿದ್ದಾರೆ. ಜೆಡಿಎಸ್‍ನಲ್ಲಿ ದೇವೇಗೌಡರಿಂದ ಅಧಿಕಾರ ಸಿಗಲಿಲ್ಲ ಎಂದು ನಾವು ಕಟ್ಟಿದ ಕಾಂಗ್ರೆಸ್ ಮನೆಗೆ ಬಂದು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದರು.

ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿ ಏನು ಮಾಡಲಾಗುತ್ತಿರಲಿಲ್ಲ, ಕುಮಾರಸ್ವಾಮಿ ಹಾಗೂ ರೇವಣ್ಣ ನನ್ನ ವಸತಿ ಖಾತೆಯಲ್ಲಿ ಮೂಗು ತೂರಿಸುತ್ತಿದ್ದರು. ಹೀಗಾಗಿ ರಾಜಿನಾಮೆ ನೀಡುತ್ತೇನೆ ಎಂದು ಮೂರು ಬಾರಿ ಸಿದ್ದರಾಮಯ್ಯನವರಿಗೆ ಹೇಳಿದ್ದೆ. ಉಪ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಬಂದು ನನ್ನ ಕ್ಷೇತ್ರದಲ್ಲಿ ತೊಡೆ ತಟ್ಟಲಿ. ಇಂತಹ ತೊಡೆ ತಟ್ಟುವವರನ್ನು ನಾನು ನೋಡಿದ್ದೇನೆ. ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಹೇಳುತ್ತೇನೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಸಹ ಹರಿಹಾಯ್ದರು.

ಅನರ್ಹತೆಯ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ನ್ಯಾಯಾಲಯದ ಆದೇಶಕ್ಕೆ ತಲೆ ಬಾಗುತ್ತೇನೆ. ಕೊನೆಯದಾಗಿ ಎರಡು ಉದ್ದೇಶಗಳಿವೆ ಒಂದು ರಾಜಕೀಯ ನಿವೃತ್ತಿ, ಇನ್ನೊಂದು ನನಗೆ ಯಾರ ಹಂಗೂ ಬೇಡ ಕಾರ್ಯಕರ್ತರ ಅಭಿಪ್ರಾಯದಿಂದ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ನಿರ್ಧರಿಸುತ್ತೇನೆ. ಮಧ್ಯಂತರ ಚುನಾವಣೆ ಸದ್ಯಕ್ಕೆ ಬರುವುದಿಲ್ಲ. ಕೇಂದ್ರದಲ್ಲಿ ಸ್ಥಿರವಾದ ಸರ್ಕಾರ ಇದೆ, ರಾಜ್ಯದಲ್ಲಿ ಈಗ ಪ್ರಾರಂಭವಾಗಿದೆ. ಕಾಂಗ್ರೆಸ್ಸಿನವರು ಮಧ್ಯಂತರ ಚುನಾವಣೆ ಬರುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ ವ್ಯಂಗ್ಯವಾಡಿದರು.

ರಮೇಶ್ ಕುಮಾರ್ ಅವರು ತಾವೇ ಸತ್ಯ ಹರಿಶ್ಚಂದ್ರ ಅಂದುಕೊಂಡಿದ್ದಾರೆ. ಹರಿಶ್ಚಂದ್ರನಂತೆ ಮಾತನಾಡುತ್ತಾರೆ ಅಷ್ಟೇ. ಸತ್ಯ ಹರಿಶ್ಚಂದ್ರರಾಗಿದ್ದರೆ ಮುನಿಯಪ್ಪ ಅವರನ್ನೇಕೆ ಸೋಲಿಸಿದರು. ಕಾಂಗ್ರೆಸ್‍ಗೆ ತತ್ವ ಸಿದ್ದಾಂತ ಇದ್ದರೆ, ಮೊದಲು ಪಕ್ಷದಿಂದ ರಮೇಶ್ ಕುಮಾರ್ ಅವರನ್ನು ಉಚ್ಛಾಟನೆ ಮಾಡಬೇಕು. ಮುನಿಯಪ್ಪ ಸೋಲುವುದಕ್ಕೆ ಮೂಲವಾಗಿ ರಮೇಶ್ ಕುಮಾರ್ ಅವರೇ ಕಾರಣ. ಕಾಂಗ್ರೆಸ್ ರಾಜ್ಯದಲ್ಲಿ ನೆಲ ಕಚ್ಚಲು ಮುಖಂಡರು ತೆಗದುಕೊಳ್ಳುವ ಏಕಪಕ್ಷೀಯ ನಿರ್ಧಾರಗಳು ಹಾಗೂ ಸ್ವಾರ್ಥ ರಾಜಕಾರಣವೇ ಕಾರಣ ಎಂದು ಹೇಳುವ ಮೂಲಕ ಕಾಂಗ್ರೆಸ್ ನೆಲ ಕಚ್ಚಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರಿಗೆ ಟಾಂಗ್ ನೀಡಿದ್ದಾರೆ.

ನಾನು ನಿಷ್ಟಾವಂತ ಕಾಂಗ್ರೆಸ್ಸಿಗ. ನನ್ನ ಬಗ್ಗೆ ಸುಳ್ಳು ಅರೋಪ ಮಾಡಿದರೆ ಇವರ ಬಗ್ಗೆ ಬಿಚ್ಚಿಡಬೇಕಾಗುತ್ತದೆ. ಇವರ ಕಥೆಗಳನ್ನು ಹೇಳಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರಿಗೆ ಎಂಟಿಬಿ ನಾಗರಾಜ್ ಅವರು ಎಚ್ಚರಿಕೆ ಹಾಗೂ ಬಹಿರಂಗ ಸವಾಲು ಹಾಕಿದರು.

Comments

Leave a Reply

Your email address will not be published. Required fields are marked *