ಕೈ ಅಲ್ಲ, ಎದೆ ಬಗೆದ್ರೂ ನನ್ನ ಜನ್ರಿಗೆ ನಾನು ಬದ್ಧ- ಸುಧಾಕರ್

ಬೆಂಗಳೂರು: ಒಂದೆಡೆ ಸಾವರ್ಕರ್ ಗೆ ಭಾರತ ರತ್ನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರುಗಳಲ್ಲಿ ವಾರ್ ಮುಂದುವರಿದರೆ, ಇನ್ನೊಂದೆಡೆ ತಾಲೂಕು ರಚನೆ ವಿಚಾರದಲ್ಲಿ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಹಾಗೂ ಗೌರಿಬಿದನೂರು ಶಾಸಕ ಮಧ್ಯೆ ಟಾಕ್ ಫೈಟ್ ನಡೆಯುತ್ತಿದೆ.

ಮಂಚೇನ ಹಳ್ಳಿ ತಾಲೂಕು ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಶಿವಶಂಕರ ರೆಡ್ಡಿ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಅನರ್ಹ ಶಾಸಕ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ. ನನ್ನ ಕೈ ಅಲ್ಲ, ನನ್ನ ಎದೆ ಬಗೆದರೂ, ಮಂಚೇನಹಳ್ಳಿ ತಾಲೂಕು ರಚನೆಯ ವಿಷಯದಲ್ಲಿ ನಾನು ನನ್ನ ಜನರಿಗೆ ಬದ್ಧನಾಗಿದ್ದೇನೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೆ ಮಹಾತ್ಮ ಗಾಂಧಿಜೀ ಅವರ 150ನೇ ಜನ್ಮ ವರ್ಷ ಆಚರಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಜಾ ಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ಶಿವಶಂಕರ ರೆಡ್ಡಿ ಅವರ ಮೇಲೆ ಕ್ರಮ ಜರುಗಿಸಲಿ ಎಂದು ಕಿಡಿಕಾರಿದ್ದಾರೆ.

ಇಂದು ಇಡೀ ಜಗತ್ತಿಗೆ ಅವರ ಗೂಂಡಾ ಮನಸ್ಥಿತಿಯ ಪರಿಚಯವಾಗಿದೆ. ಸಮಾಜಕ್ಕೆ ಮಾದರಿಯಾಗಬೇಕಾದ ರಾಜಕಾರಣಿಗಳು ಇಂತಹ ಕೀಳು ಮಟ್ಟಕೆ ಇಳಿದಿರುವುದು ದುರ್ದೈವ ಎಂದು ಕೂಡ ಟ್ವೀಟ್ ನಲ್ಲಿ ಸುಧಾಕರ್ ಉಲ್ಲೇಖಿಸಿದ್ದಾರೆ.

ರೆಡ್ಡಿ ಎಚ್ಚರಿಕೆ ಏನು?
ಗಂಗಸಂದ್ರ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಶಿವಶಂಕರ ರೆಡ್ಡಿ, ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ತಂಟೆಗೆ ಬಂದರೆ ಕೈ ಕತ್ತರಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.

ಚಿಕ್ಕಬಳ್ಳಾಪುರದ ಸುಧಾಕರ್ ಅವರು ಮಂಚೇನಹಳ್ಳಿ ತಾಲೂಕು ಮಾಡುವುದಾಗಿ ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ತೊಂಡೆಬಾವಿ ಹೋಬಳಿಯನ್ನ ಮಂಚೇನಹಳ್ಳಿಗೆ ಸೇರಿಸೋಕೆ ಪ್ರಯತ್ನ ಮಾಡಿದ್ದಾರೆ. ಅದಲ್ಲದೆ ಕೆಲ ಗ್ರಾಮಗಳನ್ನ ನಮ್ಮವರೇ ಕುಮ್ಮಕ್ಕು ನೀಡಿ ಮಂಚೇನಹಳ್ಳಿಗೆ ಸೇರಿಸೋಕೆ ಸುಧಾಕರ್ ಜೊತೆ ಕೈ ಜೋಡಿಸಿದ್ದಾರೆ. ಆದರೆ ಇದನ್ನು ನಾನು ಸಹಿಸುವುದಿಲ್ಲ ಎಂದು ಕಿಡಿಕಾರಿದ್ದರು.

Comments

Leave a Reply

Your email address will not be published. Required fields are marked *