ಹೊಸ ಕಲ್ಪನೆ ಮೂಲಕ ಕೊರೊನಾ ಬಗ್ಗೆ ತಲೆಗೆ ಹುಳಬಿಟ್ಟ ಭಟ್ರು

ಬೆಂಗಳೂರು: ಸದ್ಯ ಎಲ್ಲೆಡೆ ಭಾರೀ ಚರ್ಚೆ ನಡೆಯುತ್ತಿರೋದು, ಎಲ್ಲರಲ್ಲಿ ಆತಂಕ ಮೂಡಿಸಿರುವ ವಿಚಾರ ಅಂದರೆ ಕೊರೊನಾ ವೈರಸ್. ವಿಶ್ವಾದ್ಯಂತ ಹರಡುತ್ತಿರುವ ಈ ಸೋಂಕಿನ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ತಮ್ಮದೇ ಆದ ಕಲ್ಪನೆಯನ್ನು ಜನರ ಮುಂದಿಟ್ಟಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬರುವ ಚಿತ್ರಗಳು ವಿಶಿಷ್ಠವಾಗಿರುತ್ತದೆ. ಅವರ ಚಿತ್ರಗಳಂತೆ ಅವರ ಕಲ್ಪನೆಗಳು ಕೂಡ ವಿಶೇಷವಾಗಿದ್ದು, ಭಟ್ರು ಹೇಳುವ ಸಿಂಪಲ್ ಲೈನ್‍ನಲ್ಲಿ ಕೂಡ ಅರ್ಥಪೂರ್ಣ ಸಂದೇಶವಿರುತ್ತೆ. ಈ ಮಾತಿಗೆ ಸದ್ಯ ಯೋಗರಾಜ್ ಭಟ್ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಸಾಕ್ಷಿಯಾಗಿದೆ.

ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಯೋಗರಾಜ್ ಭಟ್ ಅವರು ಕೊರೊನಾ ವೈರಸ್ ಬಗ್ಗೆ ಪೋಸ್ಟ್‌ವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ, ‘ಅಕಸ್ಮಾತ್, ನರಮನುಷ್ಯರೆಲ್ಲಾ ಭೂಲೋಕಕ್ಕೆ ವೈರಸ್‍ಗಳಾಗಿದ್ದು, ಈ ಕೊರೊನಾ ಮನುಷ್ಯರನ್ನು ತೆಗೆಯಲು ಪ್ರಕೃತಿ ಸಿಡಿಸಿರುವ ‘ಔಷಧ’ ಆಗಿದ್ದರೆ ಏನು ಮಾಡುವುದು? ಎಂದು ಪ್ರಶ್ನೆ ಕೇಳಿ ಯೋಗರಾಜ್ ಭಟ್ ಅವರು ನೆಟ್ಟಿಗರ ತಲೆಗೆ ಹುಳ ಬಿಟ್ಟಿದ್ದಾರೆ. ಅಲ್ಲದೇ ಇದು ನಾನು ಹೇಳಿದ್ದಲ್ಲ, ಯಾರೋ ಹೇಳಿದ್ದು ಎಂದು ತಿಳಿಸಿ ಜಾಣತನದಿಂದ ಜಾರಿಕೊಂಡಿದ್ದಾರೆ.

https://www.instagram.com/p/B91jXn7nFjL/

ಇದನ್ನು ಓದಿದವರಿಗೆ ಭಟ್ರು ಹೇಳುತ್ತಿರೋದು ನಿಜವಿರಬಹುದಾ ಅನ್ನೋ ಪ್ರಶ್ನೆ ಕಾಡುತ್ತಿರೋದಂತೂ ಸತ್ಯ. ಮೇಲ್ನೋಟಕ್ಕೆ ಭಟ್ರು ಮಾತು ಉಡಾಫೆ, ತಮಾಷೆ ಮಾತಿನಂತೆ ಕಂಡರೂ ಇದರಲ್ಲಿ ಅರ್ಥಪೂರ್ಣವಾದ ಸಂದೇಶವಿದೆ. ಮನುಷ್ಯರು ಪ್ರಕೃತಿಯ ಮೇಲೆ ಎಸಗುತ್ತಿರುವ ದೌರ್ಜನ್ಯ ಅಂತ್ಯವಾಗುವುದು ಮಾನವನ ಅಂತ್ಯದೊಂದಿಗೆ, ಹೀಗಾಗಿ ಪ್ರಕೃತಿಯೇ ಮಾನವನ ಬಲಿ ಪಡೆಯುತ್ತದೆ ಎಂಬ ಗೂಡಾರ್ಥ ಯೋಗರಾಜ್ ಭಟ್ ಅವರ ಮಾತಿನಲ್ಲಿದೆ.

ಈ ಪೋಸ್ಟ್ ನೋಡಿ ತಲೆಗೆ ಹುಳಬಿಟ್ಟುಕೊಂಡ ಕೆಲ ನೆಟ್ಟಿಗರು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕೊರೊನಾ ವೈರಸ್‍ಗಿಂತ ದೊಡ್ಡ ವೈರಸ್ ಅನ್ನು ನೀವು ನಮ್ಮ ತಲೆಗೆ ಬಿಟ್ರಲ್ಲಾ ಭಟ್ರೆ ಎಂದು ಹೇಳಿದ್ದಾರೆ. ಕೆಲವರು ನಾವು ಈ ವೈರಸ್‍ಗೆ ಕೊರೊನಾ ಅಂತ ಹೆಸರಿಟ್ಟಿದ್ದೇವೆ, ಆದ್ರೆ ಆ ವೈರಸ್ ನಮಗೆ ಯಾವ ಹೆಸರಿಟ್ಟಿದೆಯೋ? ಅಂತ ಪ್ರಶ್ನೆ ಕೂಡ ಮಾಡಿದ್ದಾರೆ. ಇನ್ನೂ ಹಲವರು ನಾವು ಹೀಗೆಯೇ ನಮ್ಮ ಮನಸ್ಸಿನಲ್ಲಿ ಯೋಚಿಸಿ ಸುಮ್ಮನ್ನಿದ್ದೆವು, ಆದ್ರೆ ಅದನ್ನ ನೀವು ಎಲ್ಲರಿಗೂ ಹೇಳಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೇ ಭಟ್ರ ವಿಶಿಷ್ಟ ಕಲ್ಪನಾ ಶಕ್ತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ಅಟ್ಟಹಾಸವನ್ನು ಕಂಟ್ರೋಲ್ ಮಾಡುವ ಯಾವುದೇ ಮಾರ್ಗ ಇಡೀ ಜಗತ್ತಿಗೇ ಕಾಣದಂತಾಗಿದೆ. ಹಾಗಾಗಿಯೇ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ನಿನ್ನೆ ಮೊನ್ನೆವರೆಗೂ 5 ಸಾವಿರದ ಗಡಿ ದಾಟಿದ್ದ ಸೋಂಕಿತರ ಸಾವಿನ ಸಂಖ್ಯೆ. ಈಗ 8 ಸಾವಿರದತ್ತ ಮುನ್ನುಗ್ಗುತ್ತಿದೆ. ಇಡೀ ವಿಶ್ವದಲ್ಲಿ ಯಾವ ದೇಶದಲ್ಲೂ ಕೊರೊನಾ ಕಂಟ್ರೋಲ್‍ಗೆ ಬಂದಿಲ್ಲ. ಹಾಗಾಗಿ ಸದ್ಯದ ಮಟ್ಟಿಗೆ ಇಡೀ ವಿಶ್ವದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 7,894 ದಾಟಿದೆ. 1,94,584 ಸೋಂಕಿತರಿದ್ದು, ಇದುವರೆಗೂ 81,080 ಮಂದಿ ಗುಣಮುಖರಾಗಿದ್ದಾರೆ.

ಇತ್ತ ಭಾರತದಲ್ಲೂ ತನ್ನ ಕರಿನೆರಳು ಬೀರಿರುವ ಕೊರೊನಾಗೆ ಈವರೆಗೆ 147 ಮಂದಿ ತುತ್ತಾಗಿದ್ದಾರೆ. ಅವರಲ್ಲಿ 14 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 131 ಮಂದಿ ಇನ್ನೂ ಕೊರೊನಾದಿಂದ ಬಳಲುತ್ತಿದ್ದಾರೆ. ಈವರೆಗೆ ಮಹಾಮಾರಿ ಕೊರೊನಾಗೆ ದೇಶದಲ್ಲಿ 3 ಮಂದಿ ಬಲಿಯಾಗಿದ್ದಾರೆ. ಕರ್ನಾಟಕದ ಕಲಬುರಗಿಯಲ್ಲಿ 1, ದೆಹಲಿಯಲ್ಲಿ 1, ಮಹಾರಾಷ್ಟ್ರದಲ್ಲಿ 1 ಹೀಗೆ ಮೂರು ಸಾವಾಗಿದೆ. ಕರ್ನಾಟಕದಲ್ಲಿ ಈವರೆಗೆ 11 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಮೂವರು ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 7 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *