ದನಕಾಯೋನು ನಿರ್ಮಾಪಕರ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ ಭಟ್ರು

ಬೆಂಗಳೂರು: ದುನಿಯಾ ವಿಜಿ ಮತ್ತು ಪ್ರಿಯಾಮಣಿ ಅಭಿನಯಿಸಿದ್ದ ‘ದನ ಕಾಯೋನು’ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ನಿರ್ದೇಶಕ ಯೋಗರಾಜ್ ಭಟ್ ದೂರು ನೀಡಿದ್ದಾರೆ. ನಿರ್ಮಾಪಕರು ನೀಡಿದ ಎರಡು ಚೆಕ್ ಗಳು ಬೌನ್ಸ್ ಆದ ಹಿನ್ನೆಲೆಯಲ್ಲಿ ಯೋಗರಾಜ್ ಭಟ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಚಿತ್ರ ಬಿಡುಗಡೆ ಸಂದರ್ಭದಲ್ಲೂ ಇವರಿಬ್ಬರ ನಡುವೆ ಸಣ್ಣ ಮಟ್ಟಿನ ಅಸಮಾಧಾನ ಇತ್ತು. ನನ್ನ ವಿರುದ್ಧ ಛಾಯಾಗ್ರಾಹಕ ಜ್ಞಾನಮೂರ್ತಿ ಬಗ್ಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಲೂಸ್ ಟಾಕ್ ಮಾತನಾಡಿದ್ದಾರೆ ಎಂದು ಯೋಗರಾಜ್ ಭಟ್ ಆರೋಪಿಸಿದ್ದರು. ಕೊನೆಗೆ ಅದು ಸಂಧಾನ ನಡೆಸಿದ ಬಳಿಕ ಚಿತ್ರ ಬಿಡುಗಡೆಯಾಗಿತ್ತು.

ಈ ವಿಚಾರದ ಬಗ್ಗೆ ಯೋಗರಾಜ್ ಭಟ್ ಅವರು ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?
ನಾನು ದನ ಕಾಯೋನು ಎಂಬ ಕನ್ನಡ ಚಲನಚಿತ್ರವನ್ನು ಬರೆದು ನಿರ್ದೇಶಿಸಿದ್ದೇನೆ. ಸದರ ಚಿತ್ರವನ್ನು ಆರ್.ಎಸ್.ಪ್ರೊಡಕ್ಷನ್ ಸಂಸ್ಥೆಯು ನಿರ್ಮಾಣ ಮಾಡಿರುತ್ತಾರೆ. ಆರ್. ಶ್ರೀನಿವಾಸ್ ಎಂಬವರು ಸದರಿ ಸಂಸ್ಥೆಯ ಮಾಲೀಕರಾಗಿರುತ್ತಾರೆ. ಜಯಣ್ಣ ಕಂಬೈನ್ಸ್ ಚಿತ್ರದ ವಿತರಣೆಯ ಹಕ್ಕನ್ನು ಹೊಂದಿರುತ್ತಾರೆ. 07-10-2016ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅಭೂತ ಪೂರ್ವ ಯಶಸ್ಸನ್ನು ಗಳಿಸಿದೆ.

ಆರ್.ಶ್ರೀನಿವಾಸ್ ಎಂಬವರಿಗೆ ಚಿತ್ರದ ಎಲ್ಲಾ ಶಾಸನಬದ್ಧವಾದ ತೆರಿಗೆಯನ್ನು ಪಾವತಿಸಿ ಎಂದು ತಿಳಿಸಿದ್ದೆ. ಅದಕ್ಕೆ ಅವರು ಒಪ್ಪಿಗೆಯನ್ನು ಸೂಚಿಸಿದ್ದರು. ಆದರೆ ಸಿನಿಮಾ ಬಿಡುಗಡೆಯಾಗಿ ಸುಮಾರು 10 ತಿಂಗಳಾದ್ರೂ ಶ್ರೀನಿವಾಸ್ ಶೇ.100 ತೆರಿಗೆ ವಿನಾಯಿತಿ ಪತ್ರಕ್ಕೆ ಅರ್ಜಿಯೇ ಸಲ್ಲಿಸಿಲ್ಲ. ಸದರಿ ಪತ್ರವನ್ನು ವಾಣಿಜ್ಯ ತೆರಿಗೆ ಇಲಾಖೆ ಪಡೆದು ತೋರಿಸದೇ ಚಲನಚಿತ್ರ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳ ಚಿತ್ರದ ಗಳಿಕೆಯ ಹಣವನ್ನು ಪಡೆದಿದ್ದಾರೆ. ಹೀಗೆ ಮಾಡಿದರೂ ಚಲನಚಿತ್ರಕ್ಕೆ ಸಂಬಂಧಪಟ್ಟ ವಾಣಿಜ್ಯ ತೆರಿಗೆಯನ್ನು ಪಾವತಿಸಿರುವುದಿಲ್ಲ. ಹೀಗಾಗಿ ಶ್ರೀನಿವಾಸ್ ಮೇಲೆ ಕಾನೂನುಬದ್ಧವಾದ ತೆರಿಗೆಯನ್ನು ವಿಧಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

 

Comments

Leave a Reply

Your email address will not be published. Required fields are marked *