ಮರ್ಡರ್ ಮಿಸ್ಟರಿಯನ್ನು `ವೆನಿಲ್ಲಾ’ ಐಸ್‍ಕ್ರೀಂನೊಂದಿಗೆ ಸವಿಯಿರಿ!

ಮರ್ಡರ್ ಮಿಸ್ಟರಿಯ ಕಥೆಗಳಿಗೆ ಕೊರತೆಯಿಲ್ಲ. ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ಬಂದಿದ್ದರೂ ಕಥೆಯನ್ನು ಸರಿಯಾಗಿ ನಿರೂಪಿಸದ ಕಾರಣ ಸಿನಿಮಾಗಳಿಗೆ ಸೋಲಾಗುತ್ತದೆ. ಆದರೆ ಸದಭಿರುಚಿಯ ಸಿನಿಮಾಗಳ ನಿರ್ದೇಶಕ ಎಂದೇ ಪ್ರಸಿದ್ಧರಾಗಿರುವ ಜಯತೀರ್ಥ ಅವರು ಸಿನಿ ಪ್ರಿಯರ ನಿರೀಕ್ಷೆಗಳನ್ನು ಹುಸಿಗೊಳಿಸದೇ ಸುಂದರವಾಗಿ ಸವಿಯಲು `ವೆನಿಲ್ಲಾ’ವನ್ನು ನಿಮ್ಮ ಮುಂದಿಟ್ಟಿದ್ದಾರೆ.

ಒಂದು ಭಯಾನಕ ಕೊಲೆ, ಕ್ಷಣಕ್ಷಣಕ್ಕೂ ರೋಚಕ ಟ್ವಿಸ್ಟ್, ಕೊಲೆಗೂ ನಾಯಕ ನಟಿಗೂ ಇರೋ ಸಂಬಂಧ ಏನು? ಕೊಲೆ ಮಾಡಿದ್ದು ಯಾಕೆ? ಕೊಲೆ ಮಾಡಿದವರು ಯಾರು? ಈ ರೀತಿಯಾಗಿ ಪ್ರತಿಹಂತದಲ್ಲಿ ವೀಕ್ಷಕರಿಗೆ ರೋಚಕತೆಯನ್ನು ತೋರಿಸುವಲ್ಲಿ ಬ್ಯೂಟಿಫುಲ್ ಮನಸುಗಳು ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ಜಯತೀರ್ಥ ಯಶಸ್ವಿಯಾಗಿದ್ದಾರೆ.

ಮರ್ಡರ್, ಒಂದು ಭಯಾನಕ ರೋಗ ಮತ್ತು ಎಂಥಾ ಕಾಯಿಲೆಗಳನ್ನೂ ವಾಸಿ ಮಾಡಬಲ್ಲ ಪ್ರಾಂಜಲ ಪ್ರೀತಿಯ ಸುತ್ತಾ ಸುತ್ತುವ ಈ ಕಥೆಯಲ್ಲಿ ನಾಯಕ ಮತ್ತು ನಾಯಕಿ ಬಾಲ್ಯ ಸ್ನೇಹಿತರು. ಈ ನಡುವೆ ನಾಯಕಿಯ ಕಡೆಯಿಂದ ಅಚಾನಕ್ಕಾಗುವ ಒಂದು ಆಕ್ಸಿಡೆಂಟ್, ಅದಕ್ಕೆ ತಲೆ ಕೊಟ್ಟು ಹೋರಾಡುವ ಹೀರೋ ಹೀಗೆ ಒಂದು ಚಿತ್ರಕ್ಕೆ ಏನೆಲ್ಲ ಫ್ಲೇವರ್ ಗಳು ಬೇಕೋ ಆ ಎಲ್ಲ ಫ್ಲೇವರ್ ಗಳ ಘಮ ವೆನಿಲ್ಲಾದಲ್ಲಿದೆ.

ಮಂಡ್ಯ ರಮೇಶ್ ಗರಡಿಯಲ್ಲಿ ಪಳಗಿ ರಂಗಭೂಮಿಯಲ್ಲಿ ಸೈ ಎನಿಸಿ ಉತ್ತಮ ಕಥೆಯ ಮೂಲಕವೇ ಕನ್ನಡ ಚಿತ್ರದಲ್ಲಿ ಎಂಟ್ರಿಯಾಗಬೇಕು ಎಂದು ಕನಸು ಕಾಣುತ್ತಿದ್ದ ಅವಿನಾಶ್ ಅವರು ಅನುಭವಿ ನಟನಂತೆ ಅಭಿನಯಿಸಿದ್ದಾರೆ. ಅವಿನಾಶ್ ಮತ್ತು ಸ್ವಾತಿ ಕೊಂಡೆ ನಾಯಕ ನಾಯಕಿಯರಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಪಯಣ ರವಿಶಂಕರ್ ಪೊಲೀಸ್ ಆಫಿಸರ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರತೀ ಪಾತ್ರಗಳೂ ಕಾಡುವಂತೆ ಮೂಡಿ ಬಂದಿದ್ದು ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ಮತ್ತು ಹಿನ್ನಲೆ ಸಂಗೀತವಿದೆ. ಪ್ರತೀ ಕ್ಷಣವೂ ಕುತೂಹಲವನ್ನು ಮೂಡಿಸುವ `ವೆನಿಲ್ಲಾ’ವನ್ನು ಥಿಯೇಟರ್ ನಲ್ಲಿ ಕುಳಿತು ಚೆನ್ನಾಗಿ ಸವಿಯಬಹುದು.

 

Comments

Leave a Reply

Your email address will not be published. Required fields are marked *