ಪ್ರೀತಿಯಲ್ಲಿ ಸೋತ ಹೃದಯಗಳಿಗೆ ಹಾಡಿನ ಕಿಸ್!

ಬೆಂಗಳೂರು: ಈವರೆಗೆ ಬಿಡುಗಡೆಯಾಗಿರೋ ಎ.ಪಿ ಅರ್ಜುನ್ ನಿದೇಶನದ ಕಿಸ್ ಚಿತ್ರದ ಎಲ್ಲ ಹಾಡುಗಳೂ ಹಿಟ್ ಆಗಿವೆ. ಮಿಲಿಯನ್ನುಗಟ್ಟಲೆ ವೀವ್ಸ್ ಪಡೆದುಕೊಳ್ಳೋ ಮೂಲಕ ದಾಖಲೆಯನ್ನೂ ಬರೆದಿವೆ. ಇನ್ನೇನು ಕಿಸ್ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹೊತ್ತಿನಲ್ಲಿ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಅನಾವರಣಗೊಂಡಿದೆ. ಎಲ್ಲ ಥರದ ವಿರಹದ ನೋವಿನ ಆತ್ಮನಿವೇದನೆಯಂತಿರೋ ಈ ಹಾಡೂ ಕೂಡಾ ಇದುವರೆಗೆ ಬಂದಿರೋ ಹಾಡುಗಳಂತೆಯೇ ಹಿಟ್ ಆಗೋ ಹಾದಿಯಲ್ಲಿ ಮುಂದುವರೆಯುತ್ತಿದೆ. ಇದರೊಂದಿಗೇ ಎ.ಪಿ ಅರ್ಜುನ್ ಪ್ರೀತಿಯಲ್ಲಿ ಸೋತ ಹೃದಯಗಳಿಗೆಲ್ಲ ಕಿಸ್ ಕೊಟ್ಟು ಸಮಾಧಾನಿಸಿದ್ದಾರೆ!

ಅಷ್ಟಕ್ಕೂ ನಿರ್ದೇಶಕ ಎ.ಪಿ ಅರ್ಜುನ್ ಪ್ರೀತಿಯ ನವಿರು ಭಾವಗಳನ್ನು ಸೊಗಸಾದ ಕಥೆಗಳ ಮೂಲಕ ಕಟ್ಟಿಕೊಡುವಲ್ಲಿ ಸಿದ್ಧಹಸ್ತರು. ಅಂಬಾರಿಯಿಂದ ಇಲ್ಲಿಯವರೆಗೂ ಅರ್ಜುನ್ ನಿರ್ದೇಶನ ಮಾಡಿರೋ ಚಿತ್ರಗಳೆಲ್ಲವೂ ಪ್ರೀತಿಯ ಪುಳಕ ಹೊದ್ದ ಕಥೆಗಳ ಮೂಲಕವೇ ಗೆದ್ದಿವೆ. ಇದೀಗ ಅವರು ನಿರ್ದೇಶನ ಮಾಡಿ ಬಿಡುಗಡೆಗೆ ರೆಡಿಯಾಗಿರೋ ಕಿಸ್ ಕೂಡಾ ಪ್ರೇಮದ ಮತ್ತೊಂದು ಮಜಲಿನ ಕಥಾನಕ. ಅದರ ಪ್ಯಾಥೋ ಶೈಲಿಯ ಹಾಡೀಗ ಎಲ್ಲರ ಮನಸಿಗೂ ಕಿಸ್ ಕೊಟ್ಟಿದೆ. ಈ ಹಾಡನ್ನು ಅರ್ಜುನ್ ಪ್ರೀತಿಯಲ್ಲಿ ಸೋತ ಹೃದಯಗಳಿಗೆ ಅರ್ಪಿಸಿದ್ದಾರೆ.

ಎ.ಪಿ. ಅರ್ಜುನ್ ಅವರೇ ಬರೆದಿರೋ ಈ ಹಾಡಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸಂತೋಷ್ ವೆಂಕಿ ಧ್ವನಿಯಲ್ಲಿ ಮೂಡಿ ಬಂದಿರೋ ಕಣ್ಣ ನೀರಿದು ಜಾರುತಾ ಇದೆ ನೀನು ಇಲ್ಲದೆ ತುಂಬ ನೋವಾಗಿದೆ ಎಂಬ ಲಿರಿಕಲ್ ವೀಡಿಯೋ ಸಾಂಗ್ ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದೆ. ಸದರಿ ಪ್ಯಾಥೋ ಮೂಡಿನ ಹಾಡಿಗೆ ಯೂಟ್ಯೂಬ್‍ನಲ್ಲಿ ವ್ಯಾಪಕ ಮೆಚ್ಚುಗೆ, ವೀಕ್ಷಣೆಗಳು ಸಿಗುತ್ತಿವೆ. ವೇಗವಾಗಿ ಹೆಚ್ಚು ಹೆಚ್ಚು ವೀವ್ಸ್ ಪಡೆಯುತ್ತಲೇ ಈ ಹಿಂದಿನ ಹಾಡುಗಳ ದಾಖಲೆಗಳನ್ನು ಬೀಟ್ ಮಾಡೋ ಆವೇಗದೊಂದಿಗೆ ಸಾಗುತ್ತಿದೆ. ಅಂದಹಾಗೆ ಕಿಸ್ ಚಿತ್ರ ಇದೇ ತಿಂಗಳ 27ರಂದು ಬಿಡುಗಡೆಯಾಗಲಿದೆ.

Comments

Leave a Reply

Your email address will not be published. Required fields are marked *