ಸಿಎಸ್‍ಕೆ ಕರೆಗಾಗಿ ಎದುರು ನೋಡ್ತಿರೋ ಕೆಕೆಆರ್ ಕ್ಯಾಪ್ಟನ್!

ಮುಂಬೈ: ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕರೆಗಾಗಿ 13 ವರ್ಷಗಳಿಂದ ಎದುರು ನೋಡುತ್ತಿರುವುದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

2008ರಲ್ಲಿ ನಡೆದಿದ್ದ ಮೊದಲ ಐಪಿಎಲ್ ಆವೃತ್ತಿಯ ಹರಾಜು ಪ್ರಕ್ರಿಯೆ ವೇಳೆ ಸಿಎಸ್‍ಕೆ ತನ್ನನ್ನು ಫಸ್ಟ್ ಖರೀದಿ ಮಾಡುತ್ತೆ ಎಂದು ಯೋಚಿಸಿದ್ದೆ. ಆದರೆ ಎಂಎಸ್ ಧೋನಿ ಅವರನ್ನು ಆಯ್ಕೆ ಮಾಡಿದ್ದು ನನಗೆ ಅಚ್ಚರಿ ಮೂಡಿಸಿತ್ತು ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.

2008ರ ಮೊದಲ ಐಪಿಎಲ್ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಡೆಲ್ಲಿ ತಂಡ ಖರೀದಿ ಮಾಡಿತ್ತು. ಮೂರು ಆವೃತ್ತಿಗಳ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಕಾರ್ತಿಕ್‍ರನ್ನು ಖರೀದಿ ಮಾಡಿತ್ತು. ಉಳಿದಂತೆ ಐಪಿಎಲ್‍ನಲ್ಲಿ ಆರು ತಂಡಗಳನ್ನು ಪ್ರತಿನಿಧಿಸಿರುವ ಕಾರ್ತಿಕ್, ಸದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ. ಇದುವರೆಗೂ ತವರಿನ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಕಾರ್ತಿಕ್ ಅವರನ್ನು ಕಾಡುತ್ತಿದೆ.

2008ರ ಐಪಿಎಲ್ ಆವೃತ್ತಿಯ ಹರಾಜು ಪ್ರಕ್ರಿಯೆ ವೇಳೆ ನಾನು ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಮಿಳುನಾಡಿಗೆ ಸೇರಿದ ಕಾರಣದಿಂದ ಅದೇ ರಾಜ್ಯದ ಫ್ರಾಂಚೈಸಿ ನನ್ನನ್ನು ಖರೀದಿ ಮಾಡುತ್ತೆ ಎಂದು ಭಾವಿಸಿದ್ದೆ. ಅಲ್ಲದೇ ಅಂದು ಟೀಂ ಇಂಡಿಯಾ ತಂಡದಲ್ಲಿ ಆಡುತ್ತಿದ್ದ ಕಾರಣ ನನ್ನನ್ನು ಖರೀದಿ ಮಾಡುತ್ತಾರೆ ಎಂಬ ಆಸೆಯೊಂದಿಗೆ ತಂಡದ ಕ್ಯಾಪ್ಟನ್ ಸ್ಥಾನ ನೀಡುತ್ತಾರಾ ಎಂಬ ಸಂದೇಹ ಎದುರಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಧೋನಿರನ್ನು ಫ್ರಾಂಚೈಸಿ ಮೊದಲು ಖರೀದಿ ಮಾಡಿತ್ತು. ಆ ವೇಳೆಗೆ ಧೋನಿ ಕೂಡ ನನ್ನ ಪಕ್ಕದಲ್ಲೇ ಇದ್ದರು. ಇದನ್ನು ಧೋನಿ ಕೂಡ ಊಹೆ ಮಾಡಿರುವುದಿಲ್ಲ. ಕಳೆದ 13 ವರ್ಷಗಳಿಂದ ಚೆನ್ನೈ ಫ್ರಾಂಚೈಸಿ ಕರೆಗಾಗಿ ಎದುರು ನೋಡುತ್ತಿದ್ದೇನೆ ಎಂದು ಕಾರ್ತಿಕ್ ಹೇಳಿದ್ದಾರೆ.

2018ರ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವದಿಂದ ಗೌತಮ್ ಗಂಭೀರ್ ದೂರ ಉಳಿದ ಕಾರಣ ದಿನೇಶ್ ಕಾರ್ತಿಕ್ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಕಳೆದ 2 ವರ್ಷಗಳಲ್ಲಿ ದಿನೇಶ್ ಕಾರ್ತಿಕ್ ನಾಯತ್ವದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದ ಕಾರಣ ಅಭಿಮಾನಿಗಳಿಂದ ನಾಯಕತ್ವ ಬದಲಾವಣೆ ಕೂಗು ಕೇಳಿ ಬರುತ್ತಿದೆ. ನಾಯಕತ್ವದಲ್ಲಿ ರೇಸ್‍ನಲ್ಲಿ ಶುಬ್‍ಮನ್ ಗಿಲ್ ಮೊದಲ ಸ್ಥಾನದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *