ಕಾಂಗ್ರೆಸ್ ಯಾವಾಗ್ಲೂ ನೊಂದವರ ಪರವಿರುತ್ತೆ: ದಿನೇಶ್ ಗುಂಡೂರಾವ್

– ಐಎಂಎ  ಪ್ರಕರಣದ ಕುರಿತು ಸಿಎಂಗೆ ಪತ್ರ

ಬೆಂಗಳೂರು: ಐಎಂಎ ಹಗರಣ ಪ್ರಕರಣವನ್ನು ಎಸ್‍ಐಟಿಗೆ ವಹಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮುಖ್ಯಮಂತ್ರಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಪಕ್ಷ ಯಾವಾಗಲೂ ನೊಂದವರ ಪರವಿರುತ್ತದೆ. ಐಎಂಎ ಹಗರಣದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗಬೇಕು. ಆರೋಪಿಗಳು ಎಷ್ಟೇ ದೊಡ್ಡವರಿರಲಿ ಮೂಲಾಜಿಲ್ಲದೆ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಮಾಜಿ ಸಚಿವ ರೋಷನ್ ಬೇಗ್ ಅವರ ವಿರುದ್ಧ ಕ್ರಮಕ್ಕೆ ದಿನೇಶ್ ಗುಂಡೂರಾವ್ ಪರೋಕ್ಷವಾಗಿ ಮನವಿ ಸಲ್ಲಿಸಿದರಾ ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಐಎಂಎ ಹಗರಣದ ಸಂಬಂಧ ಸಂಪೂರ್ಣ ಮಾಹಿತಿ ಪಡೆಯುವ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಶನಿವಾರ ಬುಲಾವ್ ನೀಡಿದ್ದರು. ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಸಚಿವರಿಗೆ ವಿಧಾನ ಪರಿಷತ್ ಸದಸ್ಯರುಗಳಾದ ನಜೀರ್ ಅಹ್ಮದ್ ಹಾಗೂ ರಿಜ್ವಾನ್ ಅರ್ಷದ್ ಸಾಥ್ ನೀಡಿದ್ದರು.

ಪಕ್ಷಕ್ಕೆ ಮುಜುಗರ ಆಗುವ ಸಂಭವ ಇದ್ದರೆ ಎಸ್‍ಐಟಿ ವಿಚಾರಣೆಗೆ ಮೊದಲೇ ರೋಷನ್ ಬೇಗ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಅವರು, ಸಚಿವ ಜಮೀರ್ ಅಹಮ್ಮದ್ ಹಾಗೂ ಮುಸ್ಲಿಂ ಮುಖಂಡರ ಜೊತೆಗೆ ಚರ್ಚೆ ನಡೆಸಿದ್ದರು ಎನ್ನಲಾಗಿತ್ತು.

ದಿನೇಶ್ ಗುಂಡೂರಾವ್ ಅವರ ಭೇಟಿಯ ಬಳಿಕ ಮಾತನಾಡಿದ್ದ ಸಚಿವ ಜಮೀರ್ ಅಹ್ಮದ್ ಅವರು, ಐಎಂಎ ಹಗರಣದ ಬಗ್ಗೆ ಮಾತುಕತೆ ನಡೆಸಲಾಗಿದೆ. ಈ ಪ್ರಕರಣದ ಕುರಿತು ಇದುವರೆಗೂ ನಡೆದ ತನಿಖೆಯ ಕುರಿತು ಮಾಹಿತಿ ನೀಡಿದ್ದೇನೆ. ಇದರಲ್ಲಿ ರೋಷನ್ ಬೇಗ್ ಅವರ ಪಾತ್ರವಿದೆ ಎನ್ನುವುಕ್ಕೆ ಸೂಕ್ತ ದಾಖಲೆಗಳು ಬೇಕು. ಆಡಿಯೋದಲ್ಲಿ ಮಾಜಿ ಸಚಿವ ಹೆಸರು ಪ್ರಸ್ತಾಪಿಸಲಾಗಿದೆ. ಆದರೆ ಆಡಿಯೋವನ್ನು ಧ್ವನಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಮನ್ಸೂರ್ ಧ್ವನಿ ಎನ್ನುವುದು ಸಾಬೀತಾದರೆ ರೋಷನ್ ಬೇಗ್ ಪಾತ್ರದ ಬಗ್ಗೆ ಮಾತನಾಡಬಹುದು ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *