ದಿನೇಶ್ ಗುಂಡೂರಾವ್‍ಗೆ ಕೆಪಿಸಿಸಿ ಸಾರಥ್ಯ: ಕುಟುಂಬ ಸಮೇತರಾಗಿ ಶೃಂಗೇರಿಯಲ್ಲಿ ವಿಶೇಷ ಪೂಜೆ

ಬೆಂಗಳೂರು: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕಕ್ಕೆ ತೆರೆ ಬಿದ್ದಿದ್ದು, ಮಾಜಿ ಸಚಿವ, ಹಾಲಿ ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷರಾಗಿ ನೇಮಕಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಅಲ್ಲದೇ ಪಕ್ಷದ ಕೆಲವು ಮೂಲಗಳು ಉತ್ತರ ಕರ್ನಾಟಕದ ಹಿರಿಯ ಶಾಸಕರು ಅಧ್ಯಕ್ಷರಾಗಲಿದ್ದಾರೆ ತಿಳಿಸಿದ್ದವು. ಆದರೆ ಈಗ ದಕ್ಷಿಣ ಕರ್ನಾಟಕದ ನಾಯಕರಾದ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಲಾಗಿದೆ.

ರಾಹುಲ್ ಗಾಂಧಿಯವರು ದಿನೇಶ್ ಗುಂಡೂರಾವ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ನಿರ್ಧಾರ ತೆಗೆದುಕೊಂಡಿದ್ದಾರೆ. ಮಾಜಿ ಅಧ್ಯಕ್ಷ ಪರಮೇಶ್ವರ್ ಅವರ ಕೆಲಸವನ್ನು ಪಕ್ಷ ಗೌರವಿಸುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಜಿ.ಪರಮೇಶ್ವರ್ ಅವರು ಅಕ್ಟೋಬರ್ 27, 2010ರಿಂದ ಅಧಿಕಾರ ಸ್ವೀಕರಿಸಿದ್ದರು. ಡಿಸಿಎಂ ಆಗಿ ಆಯ್ಕೆಯಾಗುತ್ತಿದ್ದಂತೆ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2013ರ ಚುನಾವಣೆಯಲ್ಲಿ ಸೋತಿದ್ದ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅವರು ಪರಿಷತ್ ಗೆ ನೇಮಕ ಆಗಿದ್ದರು. ಆದರೆ ಅವರಿಗೆ ಯಾವುದೇ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿ ಕೊರಟಗೆರೆ ಕ್ಷೇತ್ರದಿಂದ ಆಯ್ಕೆಯಾದ ಹಿನ್ನೆಲೆಯಲ್ಲಿ ಡಿಸಿಎಂ ಸ್ಥಾನ ಸಿಕ್ಕಿದ್ದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಅವರು ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವರಾಗಿದ್ದರು. ಸಂಪುಟ ಪುನರ್ರಚನೆಯ ವೇಳೆ ಗುಂಡೂರಾವ್ ಅವರನ್ನು ಕೈ ಬಿಡಲಾಗಿತ್ತು. ಬಳಿಕ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಶಾರದಾಂಬೆಯ ದರ್ಶನ:
ರಾಜ್ಯ ಕೆಪಿಸಿಸಿಯ ನೂತನ ಅಧ್ಯಕ್ಷ ರಾಗಿ ಆಯ್ಕೆಯಾಗಿರುವ ಶಾಸಕ ದಿನೇಶ್ ಗುಂಡೂರಾವ್ ಅವರು ತಮ್ಮ ಕುಟುಂಬ ಸಮೇತರಾಗಿ ಶೃಂಗೇರಿ ಶಾರದಾಂಬೆ ದರ್ಶನ ಪಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರ ಹುಟ್ಟು ಹಬ್ಬದ ದಿನವೇ ಅಧ್ಯಕ್ಷರಾಗಿ ಆಯ್ಕೆ ಆಗಿರೋದು ವಿಶೇಷವಾಗಿದ್ದು ಅವರ ಧರ್ಮಪತ್ನಿ ಟಬು ರಾವ್ ಹೆಸರಿನಲ್ಲಿಯೂ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ವಿಶೇಷ ಪೂಜೆಯನ್ನು ಸಲ್ಲಿಸುವ ವೇಳೆ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರ ಇಬ್ಬರು ಮಕ್ಕಳಾದ ಅನನ್ಯ ರಾವ್ ಮತ್ತು ಅಮಿರಾ ರಾವ್ ಮತ್ತು ಕೆಪಿಸಿಸಿ ರಾಜ್ಯ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ನಿರಂತರ ಗಣೇಶ್ ಉಪಸ್ಥಿತರಿದ್ದರು. ವಿಶೇಷ ಪೂಜೆಯ ನಂತರ ಭಾರತಿ ತೀರ್ಥ ಸ್ವಾಮೀಜಿಯ ದರ್ಶನ ಪಡೆದು ಕುಟುಂಬದ ಎಲ್ಲಾ ಸದಸ್ಯರು ಆಶೀರ್ವಾದ ಪಡೆದರು.

Comments

Leave a Reply

Your email address will not be published. Required fields are marked *