`ದಿಲ್‍ಮಾರ್’ ಚಿತ್ರಕ್ಕೆ ಚಾಲನೆ

ಶ್ರೀ ವಿಘ್ನೇಶ್ವರ ಸಿನಿಮಾಸ್ ಲಾಂಛನದಲ್ಲಿ ನಾಗರಾಜ್ ಭದ್ರಾವತಿ ಅವರು ನಿರ್ಮಿಸುತ್ತಿರುವ `ದಿಲ್‍ಮಾರ್` ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮೀ ಲೇಔಟ್‍ನ ಗಣಪತಿ ದೇವಸ್ಥಾನದಲ್ಲಿ ಕಳೆದ ಭಾನುವಾರ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಲಹರಿ ಸಂಸ್ಥೆಯ ವೇಲು ಅವರು ಆರಂಭ ಫಲಕ ತೋರಿದರು. ಸಂಜೀವ್ ಕ್ಯಾಮೆರಾ ಚಾಲನೆ ಮಾಡಿದರು. ಮಹೇಶ್ ಕೆ ಈ ಚಿತ್ರದ ಸಹ ನಿರ್ಮಾಪಕರು.

ವಿಶ್ವದಾದ್ಯಂತ ಹೆಸರು ಮಾಡಿರುವ ಕೆ.ಜಿ.ಎಫ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಎಂ.ಚಂದ್ರಮೌಳಿ ಈ ಚಿತ್ರದ ನಿರ್ದೇಶಕರು. ಈ ಹಿಂದೆ ರಥಾವರ ಚಿತ್ರಕ್ಕೆ ಗೀತರಚನೆ ಮಾಡಿದ್ದ ಚಂದ್ರಮೌಳಿ ಅವರು ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಚಾಲೆಂಜಿಂಗ್ ಸ್ಟಾರ್ ಅಭಿನಯದ ರಾಬರ್ಟ್ ಚಿತ್ರಕ್ಕೂ ಸಂಭಾಷಣೆ ಬರೆಯುತ್ತಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ. ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗುತ್ತಿದ್ದು, ನಂತರ ಮೈಸೂರು ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ತೆಲುಗಿನ ಅರ್ಜುನ್ ರೆಡ್ಡಿ ಚಿತ್ರಕ್ಕೆ ಸಂಗೀತ ನೀಡಿದ್ದ ರದನ್ ಸಂಗೀತ ನೀಡುತ್ತಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್ ಹಾಗೂ ಬಹದ್ದೂರ್ ಚೇತನ್ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಗಿರೀಶ್ ಆರ್ ಗೌಡ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಮೋಹನ್ ನೃತ್ಯ ನಿರ್ದೇಶನ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಜಿ.ಮೂರ್ತಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ರಾಮ್ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ಆಂಧ್ರ ಮೂಲದ ಡಿಂಪಲ್ ಹಯಾತಿ ಈ ಚಿತ್ರದ ನಾಯಕಿ. ಖ್ಯಾತ ನಟ ಸಾಯಿಕುಮಾರ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.

Comments

Leave a Reply

Your email address will not be published. Required fields are marked *