ಗದಗ: ಇಂದು ನಡೆಯುತ್ತಿರುವ ಪಿಯು ಪರೀಕ್ಷೆಗಾಗಿ ವಿದ್ಯಾರ್ಥಿಗಳಲ್ಲಿ ಇರುವ ಪರೀಕ್ಷಾ ಭಯವನ್ನು ಹೋಗಲಾಡಿಸಲು ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ ಪರೀಕ್ಷಾ ಕೇಂದ್ರವನ್ನು ಮದುವೆ ಮನೆಯಂತೆ ಅಲಂಕರಿಸಲಾಗಿತ್ತು.

ಈ ರೀತಿಯ ಹೊಸ ಪ್ರಯತ್ನ ಪಟ್ಟಣದ ಅನ್ನದಾನೀಶ್ವರ ಪಿಯು ಕಾಲೇಜಿನಲ್ಲಿ ಕಂಡು ಬಂತು. ಪರೀಕ್ಷಾ ಕೇಂದ್ರವನ್ನು ತಳಿರು, ತೋರಣ, ಕಲರ್ ಕಲರ್ ರಂಗೋಲಿ ಚಿತ್ತಾರಗಳಿಂದ ಶೃಂಗಾರಗೊಳಿಸಲಾಗಿತ್ತು. ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಸಿಹಿ, ಜ್ಯೂಸ್ ನೀಡಿ ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ಆಡಳಿತ ಮಂಡಳಿ ಸ್ವಾಗತ ಕೋರಿದರು.

ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ದೇಶಿ ಉಡುಗೆಯಲ್ಲಿ ಮಿಂಚಿದರು. ನೆಹರು ಶರ್ಟ್, ಧೋತಿ, ಗಾಂಧಿ ಟೋಪಿ, ಇಳಕಲ್ ಸೀರೆ ತೊಟ್ಟು ಪರೀಕ್ಷೆ ಕೇಂದ್ರಕ್ಕೆ ಆಗಮಿಸಿದ್ದರು. ವಿದ್ಯಾರ್ಥಿಗಳು ಎಲ್ಲ ಭಯ, ಚಿಂತೆ ಬಿಟ್ಟು ಸಂತೋಷದಿಂದ ಪರೀಕ್ಷೆ ಬರೆಯಲಿ ಎಂಬುದು ನಮ್ಮ ಉದ್ದೇಶ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿತು.









Leave a Reply