ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ತಯಾರಿಸಿ ಕೇಂದ್ರಕ್ಕೆ ಸಲ್ಲಿಕೆ: ಧ್ರುವನಾರಾಯಣ

ಚಾಮರಾಜನಗರ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ವಿಸ್ತೃತ ಮೇಕೆದಾಟು ಯೋಜನೆ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರಾಗಿ ಡಿ.ಕೆ ಶಿವಕುಮಾರ್ ಇದ್ದರು ಎಂದು ಹೇಳಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಕೆಪಿಸಿಸಿ ಕಾರ್ಯದರ್ಶಿ ಧ್ರುವನಾರಾಯಣ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಸ್ತೃತ ಯೋಜನಾ ವರದಿ ಸಲ್ಲಿಸಿ ಒಂದೂವರೆ ವರ್ಷ ಕಳೆದಿದೆ. ಆದರೂ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತೇವೆ. ಇದು ರಾಜಕೀಯಕ್ಕೋಸ್ಕರ ಅಥವಾ ಜನರ ಮತ ಸೆಳೆಯಲು ಮಾಡುತ್ತಿಲ್ಲ. ಈ ವಿಚಾರವನ್ನು ಕುಮಾರಸ್ವಾಮಿ ಅರಿತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಕಳೆದ ಒಂದೂವರೆ ವರ್ಷದಿಂದ ಈ ಯೋಜನೆಯ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಈ ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ. ಯೋಜನೆ ಜಾರಿಗೊಳಿಸುವಂತೆ ಒಂದು ರಾಜಕೀಯ ಪಕ್ಷವಾಗಿ ಒತ್ತಾಯಿಸುವುದು ತಪ್ಪೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ:  ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು: ಸಿ.ಟಿ.ರವಿ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ವಿಚಾರವಾಗಿ ಮಾತನಾಡಿದ ಅವರು, ಸಹಜವಾಗಿ ಆಡಳಿತ ಪಕ್ಷ ಹೆಚ್ಚಿನ ಸ್ಥಾನ ಗಳಿಸುತ್ತದೆ. ಆದರೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಜನರ ಕಷ್ಟ ಕೇಳಲಿಲ್ಲ. ಕೊರೊನಾದಿಂದ ಮೃತಪಟ್ಟವರಿಗೆ ಪರಿಹಾರ ನೀಡಲು ವಿಫಲವಾಗಿದೆ. ಅಷ್ಟೇ ಅಲ್ಲದೆ ಬೆಲೆ ಏರಿಕೆ ನಿಯಂತ್ರಣದಲ್ಲಿ ವಿಫಲವಾಗಿದೆ. ಈ ಎಲ್ಲಾ ಕಾರಣದಿಂದಾಗಿ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ ಎಂದರು. ಇದನ್ನೂ ಓದಿ: ಪಾದಯಾತ್ರೆಗೆ ಭಾಗವಹಿಸಿ ಏನು ಮಾಡಲಿ ಹೇಳಿ: ಡಿಕೆಶಿಗೆ ಟಾಂಗ್ ಕೊಟ್ಟ HDK

ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಪ್ರಾರಂಭವಾಗಿದೆ. ಈ ಫಲಿತಾಂಶ ಮುಂಬರುವ ಜಿಪಂ, ತಾಪಂ, ವಿಧಾನಸಭಾ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಜನಪರ ಆಡಳಿತ ನೀಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಪ್ರತಿಕ್ರಿಯಿಸಿದರು.

Comments

Leave a Reply

Your email address will not be published. Required fields are marked *