ಧ್ರುವ ಸರ್ಜಾ ಸಿನಿಮಾದ ನಿರ್ಮಾಪಕ-ನಿರ್ದೇಶಕನ ಮಧ್ಯೆ ಕಿರಿಕ್: ಸ್ಪಷ್ಟನೆ ಏನು?

ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ (Martin) ಸಿನಿಮಾದ ನಿರ್ಮಾಪಕ ಉದಯ್ ಕೆ ಮೆಹ್ತಾ (Uday K Mehta) ಹಾಗೂ ನಿರ್ದೇಶಕ ಎ.ಪಿ ಅರ್ಜುನ್ ಮಧ್ಯೆ ಕಿರಿಕ್ ಆಗಿ, ಈ ಜಗಳ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲು ಏರಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈ ವಿಷಯ ವಿಸ್ತರಿಸುವ ಮುನ್ನ ಇಬ್ಬರೂ ಎಚ್ಚೆತ್ತುಕೊಂಡಿದ್ದಾರೆ. ಹಬ್ಬಿರೋದು ಗಾಸಿಪ್. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂದು ಮೆಹ್ತಾ ಮತ್ತು ಅರ್ಜುನ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ಮಾರ್ಟಿನ್  (Martin) ಚಿತ್ರಕ್ಕೆ ಲೂಪ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದೆ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಚಿತ್ರದ ಬಿಡುಗಡೆಗಾಗಿ ಧ್ರುವ ಸರ್ಜಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಚಿತ್ರೀಕರಣದಲ್ಲೂ ಮಾರ್ಟಿನ್ ದಾಖಲೆ ಬರೆದಿದೆ. ಒಟ್ಟು 240 ದಿನಗಳ ಚಿತ್ರೀಕರಣ ನಡೆದಿದೆ. ಇನ್ನು ಚಿತ್ರದ ಆಡಿಯೋ ಹಕ್ಕನ್ನು ಅಧಿಕ ಮೊತ್ತ ನೀಡಿ  ಜನಪ್ರಿಯ ಆಡಿಯೋ ಸಂಸ್ಥೆಯಾದ ಸರೆಗಮಪ ಪಡೆದುಕೊಂಡಿದೆ. ಮಣಿ ಶರ್ಮ ಅವರ ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದ್ದುರವಿ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಸತ್ಯ ಹೆಗಡೆ ಛಾಯಾಗ್ರಹಣ , ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ರಾಮ್ ಲಕ್ಷ್ಮಣ್ ಅವರ  ಸಾಹಸ ನಿರ್ದೇಶನವಿರುವ ಮಾರ್ಟಿನ್ ಚಿತ್ರದ ತಾರಾಬಳಗದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಜಾರ್ಜಿಯ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕ ಅವಿನಾಶ್, ನಿಕ್ತಿನ್ ಧೀರ್, ನವಾಬ್ ಶಾ, ರೋಹಿತ್ ಪಾಠಕ್ ಮುಂತಾದವರಿದ್ದಾರೆ.