ದೇಶದ ಅತಿ ಉದ್ದವಾದ ಸೇತುವೆ ಉದ್ಘಾಟಿಸಿ, ಯುಪಿಎ ಸರ್ಕಾರಕ್ಕೆ ಮೋದಿ ಟಾಂಗ್ ನೀಡಿದ್ದು ಹೀಗೆ

ಗುವಾಹಟಿ: ಅಟಲ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಿದ್ದರೆ 10 ವರ್ಷದ ಒಳಗಡೆ ಧೋಲಾ – ಸಾದಿಯಾ ಸೇತುವೆ ನಿರ್ಮಾಣವಾಗುತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಯುಪಿಎ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

ಸರ್ಕಾರದ ಮೂರನೇ ವರ್ಷದ ಸಂಭ್ರಮಾಚರಣೆಯನ್ನು ಈಶಾನ್ಯ ರಾಜ್ಯದಲ್ಲಿ ಆಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಅತ್ಯಂತ ಉದ್ದವಾದ ಸೇತುವೆಯನ್ನು ಉದ್ಘಾಟನೆ ಮಾಡುವ ಮೂಲಕ ಆಚರಣೆ ಮಾಡಿದರು. ಬೆಳಗ್ಗೆ 10 ಗಂಟೆಗೆ ಅಸ್ಸಾಂನ ದಿಬ್ರುಘರ್‍ಗೆ ಬಂದಿಳಿದ ಮೋದಿ ಆ ಬಳಿಕ ರಸ್ತೆ ಮಾರ್ಗವಾಗಿ ಡೋಲಾ ತಲುಪಿ ಸೇತುವೆಯನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, 2003ರಲ್ಲಿ ನಮ್ಮ ಶಾಸಕ ಜಗದೀಶ್ ಭುಯನ್ ಅಂದಿನ ಪ್ರಧಾನಿ ವಾಜಪೇಯಿ ಅವರಿಗೆ ಸೇತುವೆಯನ್ನು ನಿರ್ಮಿಸುವಂತೆ ಪತ್ರ ಬರೆದಿದ್ದರು. ವಾಜಪೇಯಿ ಅವರು ಈ ಪತ್ರಕ್ಕೆ ಶೀಘ್ರವೇ ಸ್ಪಂದಿಸಿ ಅನುಮೋದನೆ ನೀಡಿದ್ದರು. ಆದರೆ ನಂತರ ಅಧಿಕಾರಕ್ಕೆ ಬಂದ ಸರ್ಕಾರದಿಂದಾಗಿ ಈ ಸೇತುವೆ ನಿರ್ಮಾಣ ಕಾರ್ಯ ವಿಳಂಬವಾಯಿತು ಎಂದರು.

ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದ ಸರ್ಬಾನಂದ ಸೋನೊವಾಲ್‌ ಅವರು ಒಂದು ವರ್ಷದಲ್ಲಿ ಸೇತುವೆ ನಿಮಾಣ ಕಾರ್ಯವನ್ನು ಪೂರ್ಣಗೊಳಿಸಿ ಅಟಲ್ ಕಂಡ ಕನಸನ್ನು ನನಸು ಮಾಡಿದೆ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರವನ್ನು ಹೊಗಳಿದರು.

ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಅಭಿವೃದ್ಧಿಯಲ್ಲಿ ಈ ಸೇತುವೆ ಮಹತ್ವದ ಪಾತ್ರ ವಹಿಸಲಿದ್ದು, ಈ ಸೇತುವೆಯಿಂದ ಪ್ರತಿ ದಿನ 10 ಲಕ್ಷ ರೂ. ಇಂಧನ ಉಳಿತಾಯವಾಗಲಿದೆ ಎಂದರು.

ಈಶಾನ್ಯ ಭಾಗದಲ್ಲಿ ರೈಲ್ವೇ ಅಷ್ಟು ಅಭಿವೃದ್ಧಿ ಆಗಿಲ್ಲ. ಮುಂದಿನ ದಿನಗಳಲ್ಲಿ ರೈಲ್ವೇಯನ್ನೂ ಅಭಿವೃದ್ಧಿ ಮಾಡುತ್ತೇವೆ. ಸಂಪರ್ಕದ ಕೊರತೆಯಿಂದಾಗಿ ಈ ಸುಂದರ ಪ್ರದೇಶಕ್ಕೆ ಪ್ರಚಾರ ಸಿಕ್ಕಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಪ್ರದೇಶಗಳನ್ನು ಪ್ರವಾಸೋದ್ಯಮ ಹಬ್‍ಗಳನ್ನಾಗಿ ರೂಪಿಸುತ್ತೇವೆ ಎಂದು ಮೋದಿ ಈ ವೇಳೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಸೇತುವೆಯ ವಿಶೇಷತೆ ಏನು?
ಬ್ರಹ್ಮಪುತ್ರ ನದಿಯ ಉಪನದಿ ಲೋಹಿತ್‍ಗೆ 9.15 ಕಿಮೀ. ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ. 2,056 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದ್ದು, 60 ಟನ್ ತೂಕದ ಯುದ್ಧ ಟ್ಯಾಂಕ್ ಭಾರ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಅಸ್ಸಾಂ ಹಾಗೂ ಅರುಣಾಲ ಪ್ರದೇಶದ ನಡುವಿನ ಸಂಚಾರ ಅವಧಿಯನ್ನು 6 ಗಂಟೆಯಿಂದ 1 ಗಂಟೆಗೆ ಇಳಿಸಲಿದೆ. 10 ವರ್ಷದ ಹಿಂದೆ ಈ ಸೇತುವೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. 7 ವರ್ಷದಿಂದ ಈ ಸೇತುವೆ ಕಾಮಗಾರಿ ಆರಂಭವಾಗಿದ್ದು ಈಗ ಲೋಕಾರ್ಪಣೆಯಾಗಿದೆ.

https://www.youtube.com/watch?v=78gqC_xsSCU

Comments

Leave a Reply

Your email address will not be published. Required fields are marked *