‘ಸ್ಕೂಟರ್’ ಹಾಡಿನಿಂದ ಡಿಂಚಕ್ ಪೂಜಾಗೆ ಸಂಕಷ್ಟ

ನವದೆಹಲಿ: ಸಾಮಾಜಿಕ ಜಾಲತಾಣಗಳ ಮೂಲಕ ಟಾಕ್ ಆಫ್ ದಿ ಟೌನ್ ಆಗಿರೋ ಡಿಂಚಕ್ ಪೂಜಾಗೆ ಸಂಕಷ್ಟ ಎದುರಾಗಿದೆ. ಅದು ಯಾಕೆ ಅಂತೀರಾ? ಸದ್ಯ ವೈರಲ್ ಆಗಿರೋ ಆಕೆಯ “ದಿಲೋ ಕಾ ಶೂಟರ್ ಹೈ ಮೆರಾ ಸ್ಕೂಟರ್…” ಹಾಡಿನಿಂದ.

ಅಯ್ಯೋ ಅಂತದ್ದೇನಾಯ್ತಪ್ಪಾ ಆ ಹಾಡಿನಿಂದ ಅಂದ್ರಾ? ಆಕೆ ಹಾಡಿನಲ್ಲಿ ಹೇಳಿದಂತೆ ಆಕೆಯ ಸ್ಕೂಟರ್ ದಿಲೋ ಕಾ ಶೂಟರ್ ಇರಬಹುದು. ಆದ್ರೆ ಹೆಲ್ಮೆಟ್ ಹಾಕದೇ  ಡಿಂಚಕ್ ಪೂಜಾ ಆಗಲಿ ಯಾರೇ ಆಗಲಿ ದ್ವಿಚಕ್ರವಾಹನವನ್ನ ಓಡಿಸುವಂತಿಲ್ಲ. ಈ ಹಾಡಿನಲ್ಲಿ ಪೂಜಾ ಹೆಲ್ಮೆಟ್ ಹಾಕದೆ ಗಾಡಿ ಓಡಿಸಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರು ದೆಹಲಿ ಪೊಲೀಸ್ ಟ್ವಿಟ್ಟರ್ ಖಾತೆಗೆ ಟ್ವೀಟ್ ಮಾಡಿದ್ದಾರೆ.

ಈ ಮಹಿಳೆ ಹೆಲ್ಮೆಟ್ ಹಾಕದೆ ಗಾಡಿ ಓಡಿಸಿದ್ದು ಜೋರಾಗಿ ಹಾಡು ಬೇರೆ ಹಾಡಿದ್ದಾರೆ ಎಂದು ದೆಹಲಿ ಟ್ರಾಫಿಕ್ ಪೊಲೀಸ್ ಖಾತೆಗೆ ಮೋಹಿತ್ ಸಿಂಗ್ ಎಂಬವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದರ ಜೊತೆ ಈ ಹಾಡಿನಲ್ಲಿ ಪೂಜಾ ದ್ವಿಚಕ್ರ ವಾಹನ ಓಡಿಸುತ್ತಿರುವ ಸ್ಕ್ರೀನ್‍ಶಾಟ್ ಕೂಡ ಹಾಕಿದ್ದಾರೆ.

ನಂತರ ದೆಹಲಿ ಪೊಲೀಸರು ಘಟನೆಯ ಸ್ಥಳ ಹಾಗೂ ದಿನಾಂಕವನ್ನ ಕೇಳಿದ್ದು, ಮೋಹಿತ್ ಅದರ ಮಾಹಿತಿಯನ್ನೂ ಟ್ವೀಟ್ ಮಾಡಿದ್ದಾರೆ. ಘಟನೆಯ ಸ್ಥಳ ಸೂರಜ್‍ಮಲ್ ವಿಹಾರ್, ದಿನಾಂಕ ಜೂನ್ 24 2017 ಮಧ್ಯಾಹ್ನ 3:10 ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರೋ ದೆಹಲಿ ಸಂಚಾರ ಪೊಲೀಸರು ಸೂಕ್ತ ಕ್ರಮ ಕೂಗೊಳ್ಳಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಮುಂದೆ ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡ್ಬೇಕು.

ಯಾರು ಈ ಡಿಂಚಕ್ ಪೂಜಾ?: ತನ್ನ ಮೂರು ಹಾಡುಗಳಿಂದ ಡಿಂಚಕ್ ಪೂಜಾ ಯೂಟ್ಯೂಬ್ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದ್ದಾರೆ. ಸ್ವ್ಯಾಗ್ ವಾಲಿ ಟೋಪಿ, ಸೆಲ್ಫೀ ಮೈನೆ ಲೆಲಿ ಆಜ್ ಹಾಗೂ ಇತ್ತೀಚೆಗೆ ಅಪ್‍ಲೋಡ್ ಮಾಡಲಾಗಿರೋ ದಿಲೋ ಕಾ ಶೂಟರ್ ಹಾಡುಗಳು ವೈರಲ್ ಆಗಿವೆ. ಈಕೆ ಸಿನಿಮಾ ಗಾಯಕರಂತೆ ಸುಶ್ರಾವ್ಯವಾಗಿ ಹಾಡದಿದ್ದರೂ ಕೂಡ ಯುವ ಜನತೆಯ ಬಾಯಲ್ಲಿ ಈಕೆಯದ್ದೇ ಮಾತು. ಈಕೆಯ ದಿಲೋ ಕಾ ಶೂಟರ್ ಹಾಡು ಯೂಟ್ಯೂಬ್‍ನಲ್ಲಿ ಈವರೆಗೆ ಸುಮಾರು 3 ಲಕ್ಷ ವ್ಯೂವ್ಸ್ ಪಡೆದಿದೆ.

https://www.youtube.com/watch?v=q67lQM-8s9I

Comments

Leave a Reply

Your email address will not be published. Required fields are marked *