ನೆರೆ ಪರಿಹಾರ ಸಿಗದ್ದಕ್ಕೆ ಆತ್ಮಹತ್ಯೆಗೆ ಶರಣು

ಧಾರವಾಡ: ಮನೆ ಹಾನಿ ಪರಿಹಾರ ಸಿಗದ ಕಾರಣ ಅಂಗವಿಕಲೆ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡದಲ್ಲಿ ನಡೆದಿದೆ.

ಮಂಜುಳಾ ಕಲ್ಲೂರ್ ಆತ್ಮಹತ್ಯೆಗೆ ಶರಣಾದ ಯುವತಿ. ಧಾರವಾಡದ ಕಿತ್ತೂರ ರಾಣಿ ಚನ್ನಮ್ಮ ಪಾರ್ಕಿನಲ್ಲಿ ವಿಷ ಕುಡಿದು ಮಂಜುಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಧಾರವಾಡ ತಾಲೂಕಿನ ದುಬ್ಬನಮರಡಿ ಗ್ರಾಮದ ನಿವಾಸಿಯಾದ ಮಂಜುಳಾ ವಾಸವಿದ್ದ ಮನೆ ನಾಲ್ಕು ತಿಂಗಳ ಸುರಿದ ಮಳೆಗೆ ಬಿದ್ದಿತ್ತು. ಪರಿಹಾರ ನೀಡುವಂತೆ ಮಂಜುಳಾ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು. ಆದ್ರೆ ಜಿಲ್ಲಾಡಳಿತ 50 ಸಾವಿರ ರೂ. ಪರಿಹಾರ ನೀಡಿ ಕೈತೊಳೆದುಕೊಂಡಿತ್ತು.

ಮೊದಲಿಗೆ ಮನೆಯ ಒಂದು ಗೋಡೆ ಬಿದ್ದಿತ್ತು. ನಂತರ ಮಳೆ ಹೆಚ್ಚಾದಾಗ ಸಂಪೂರ್ಣ ಮನೆಯೇ ವಾಸಕ್ಕೆ ಯೋಗ್ಯವಾಗಿರದ ಸ್ಥಿತಿಯಲ್ಲಿತ್ತು. ಹೀಗಾಗಿ ಮಂಜುಳಾ ತಮಗೆ ಹೆಚ್ಚಿನ ಪರಿಹಾರ ಸಿಗಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬರುತ್ತಿದ್ದರು. ಪರಿಹಾರ ಸಿಗದ್ದಕ್ಕೆ ಮನನೊಂದು ಮಂಜುಳಾ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಜುಳಾ ಮನೆಯಲ್ಲಿ ಎಲ್ಲರೂ ಅಂಗವಿಕಲರಾಗಿದ್ದಾರೆ ಎಂದು ಅವರ ಕುಟುಂದವರು ತಿಳಿಸಿದ್ದು, ಡಿಸಿಗೆ ಈ ಎಲ್ಲ ಮಾಹಿತಿ ನೀಡಿದ್ರೂ ಕೂಡಾ ಪರಿಹಾರ ನೀಡಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *