ಧಾರವಾಡದ ಜಿಲ್ಲಾಡಳಿತದ ಸಹಾಯದಿಂದ ರಾಜಸ್ಥಾನದಲ್ಲಿದ್ದ ಹೆತ್ತವರ ಮಡಿಲು ಸೇರಿದ ಮಕ್ಕಳು

ಧಾರವಾಡ: ಇಬ್ಬರು ಬಾಲಕಿಯರು ಧಾರವಾಡದ ಜಿಲ್ಲಾಡಳಿತದ ಸಹಾಯದಿಂದ ರಾಜಸ್ಥಾನದಲ್ಲಿದ್ದ ಹೆತ್ತವರ ಮಡಿಲು ಸೇರಿದ್ದಾರೆ.

ಲಾಕ್‍ಡೌನ್‍ನಿಂದಾಗಿ 10 ವರ್ಷದ ರೋಮುಕುಮಾರಿ, 08 ವರ್ಷದ ಪೋಸುಕುಮಾರಿ ಇಬ್ಬರು ಬಾಲಕಿಯರು ದೂರದ ರಾಜಸ್ಥಾನದಲ್ಲಿದ್ದ ತಮ್ಮ ಪೋಷಕರನ್ನು ಸೇರಲಾಗದೇ ಆತಂಕಕ್ಕೀಡಾಗಿದ್ದರು. ಶುಕ್ರವಾರ ರಾತ್ರಿ ಬಾಲಕಿಯರು ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೆಮಂಡ್ವಾರ ಗ್ರಾಮದಲ್ಲಿರುವ ತಮ್ಮ ತಂದೆ-ತಾಯಿಗಳ ಮಡಿಲು ಸೇರಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಈ ಮಕ್ಕಳ ಪೋಷಕರು ಹುಬ್ಬಳ್ಳಿಯಿಂದ ರಾಜಸ್ಥಾನಕ್ಕೆ ಹೋಗಿದ್ದರು. ನಂತರ ಪೋಷಕರು ಮರಳಲು ಆಗದೇ ಮಕ್ಕಳನ್ನೂ ಕರೆತರದೇ ಪರದಾಟ ನಡೆದಿತ್ತು. 50 ದಿನಗಳಿಂದ ಹೆತ್ತವರಿಂದ ಅಗಲಿದ್ದ ಈ ಮಕ್ಕಳನ್ನು ಅವರ ಪಾಲಕರೊಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್, ಹುಬ್ಬಳ್ಳಿ ಶಹರ ತಹಶೀಲ್ದಾರ್ ಶಶಿಧರ ಮಾಡ್ಯಾಳ ಸೇರಿದಂತೆ ಹಲವರು ವಿಶೇಷ ಪ್ರಯತ್ನ ಮಾಡಿದ್ದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮೇ 07ರಂದು ಶುಭ ಹಾರೈಸಿ ಮಕ್ಕಳನ್ನು ಧಾರವಾಡದಿಂದ ಬೀಳ್ಕೊಟ್ಟಿದ್ದರು. ರಮೇಶ್ ರಾವಲ್ ಅವರು ತಮ್ಮ ಸ್ವಂತ ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ದೂರದ ರಾಜಸ್ಥಾನವರೆಗೆ ಹೋಗಿ ಮಕ್ಕಳನ್ನು ಅವರ ಪೋಷಕ ಬಳಿಗೆ ತಲುಪಿಸಿದ್ದಾರೆ. ಮಕ್ಕಳು ತಲುಪಿರುವ ಕುರಿತು ರಾಜಸ್ಥಾನದ ಸಿರೋಹಿ ಜಿಲ್ಲಾಧಿಕಾರಿ ಭಗವತಿ ಪ್ರಸಾದ್ ಅವರು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಲಿಖಿತ ಪತ್ರವನ್ನು ಬರೆದು ಧನ್ಯವಾದ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *