– ಇದು ದ್ವೇಷದ ರಾಜಕಾರಣ
ಧಾರವಾಡ: ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯ ಯೋಜನೆಗಳನ್ನು ಈಗಿನ ಸರ್ಕಾರ ತಡೆಹಿಡಿದ ವಿಚಾರಕ್ಕೆ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು, ದ್ವೇಷದ ರಾಜಕಾರಣ ಬಿಟ್ಟರೇ ಬೇರೆ ಏನೂ ಇಲ್ಲ, ಅವರ ಬಂದಾಗ ಇವರು, ಇವರು ಬಂದಾಗ ಅವರು ದ್ವೇಷ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಅಧಿಕಾರದಿಂದ ನಿರ್ಗಮಿಸುವವರು ಮಾಡಿದ ಯಾವ ಯೋಜನೆಗೂ ಅಡ್ಡಿ ಮಾಡಬಾರದು, ನಾಳೆ ಇವರು ಹೋಗುವಾಗ ಇನ್ನೊಬ್ಬರು ಅದೇ ಮಾಡಿದರೆ ಹೇಗೆ? ಈಗಿನ ರಾಜಕಾರಣಿಗಳ ನಡೆ ಸಾರ್ವಜನಿಕರ ಬದುಕಿನಲ್ಲಿ ಯಾವ ರೀತಿಯ ಸಂದೇಶ ಕೊಡುತ್ತೆ ಅನ್ನೋದನ್ನು ನೋಡಿಕೊಳ್ಳಬೇಕು. ರಾಜ್ಯಪಾಲರಿಗೂ ಬೇಗ ಅಧಿಕಾರ ಕೊಡಬೇಕಿತ್ತು ಎಂದು ಅನಿಸಿದೆ ಅದಕ್ಕೆ ಬಿಎಸ್ ಯಡಿಯೂರಪ್ಪರಿಗೆ ಬೇಗ ಅಧಿಕಾರ ಕೊಟ್ಟಿದ್ದಾರೆ ಎಂದು ಹೇಳಿದರು.

ಮೂವರು ಶಾಸಕರ ಅನರ್ಹ ವಿಚಾರವಾಗಿ ಮಾತನಾಡಿದ ಅವರು, ಪಕ್ಷದವರು ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಸ್ಪೀಕರಗೆ ಹೇಳಿದ್ದಕ್ಕೆ ಅನರ್ಹ ಮಾಡಿದ್ದಾರೆ. ಉಳಿದ ಅತೃಪ್ತರ ಬಗ್ಗೆ ಪಕ್ಷದಿಂದ ದೂರು ಕೊಡದೇ ಸ್ಪೀಕರ್ ಏನೂ ಮಾಡೋಕೆ ಆಗೋದಿಲ್ಲ. ಅತೃಪ್ತರು ಇನ್ನೂ ಎಂಎಲ್‍ಎ ಆಗಿಯೇ ಇದ್ದಾರೆ. ಇನ್ನು ಅವರ ರಾಜೀನಾಮೆ ಅಂಗೀಕಾರ ಆಗಿಲ್ಲ. ಹೀಗಾಗಿ ಅವರು ಬಹುಮತ ಸಾಬೀತಿನ ದಿನ ಸದನಕ್ಕೆ ಬರಬಹುದು. ಅವರನ್ನು ತಡೆಯುವುದಕ್ಕೆ ಬರೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂದಿನ ಪರಿಸ್ಥಿತಿ ನೋಡಿದರೆ ಬಿಎಸ್‍ವೈ ಸರ್ಕಾರ ಕೂಡ ಯಾವಾಗ ಏನ್ ಆಗುತ್ತೆ ಎಂದು ಹೇಳೋಕಾಗಲ್ಲ ಎಂದು ಸಂಶಯ ವ್ಯಕ್ತಪಡಿಸಿದರು. ಇನ್ನು ಈಗ ಬಿಜೆಪಿ ಬಳಿ 105 ಶಾಸಕರು ಮಾತ್ರ ಇದ್ದಾರೆ. ಮೂರು ಜನ ಯಾರಾದರೂ ಹಿಂದೆ ಸರಿದರೆ ಸರ್ಕಾರ ಬಿದ್ದು ಹೋಗುತ್ತೆ. ಇದು ಹೀಗೆ ಹಗ್ಗ ಜಗ್ಗಾಟದ ನಡಿಗೆ ಆಗಿಯೇ ಇರುತ್ತದೆ ಎಂದು ತಿಳಿಸಿದರು.
ಇನ್ನು ಹಣಕಾಸು ವಿಧೇಯಕಕ್ಕೆ ಅಂಗೀಕಾರ ಬೀಳದ ವಿಚಾರವಾಗಿ ಮಾತನಾಡಿ, ಇದನ್ನು ಮಂಡಿಸಲು ಕನಿಷ್ಠ ನಾಲ್ಕೈದು ಸಚಿವರಾದರೂ ಬೇಕಾಗುತ್ತೆ. ಆದರೆ ಈಗ ಸಚಿವರೇ ಇಲ್ಲದ ಕಾರಣ ಬಿಎಸ್‍ವೈ ಒಬ್ಬರೇ ಹೇಗೆ ಅದನ್ನು ಮಂಡಿಸುತ್ತಾರೆ ನೋಡಬೇಕು ಎಂದರು.

Leave a Reply