8.50 ಲಕ್ಷ ಸ್ಪರ್ಧಿಗಳನ್ನ ಹಿಂದಿಕ್ಕಿ ಸೇನೆಗೆ ಧಾರವಾಡದ ಯುವತಿ ಆಯ್ಕೆ

ಧಾರವಾಡ: 8.50 ಲಕ್ಷ ಸ್ಪರ್ಧಿಗಳನ್ನು ಹಿಂದಿಕ್ಕಿ ಭಾರತೀಯ ಸೇನೆಗೆ ಧಾರವಾಡದ ಯುವತಿ ಭೀಮಕ್ಕ ಆಯ್ಕೆಯಾಗಿದ್ದಾರೆ.

ಧಾರವಾಡ ಜಿಲ್ಲೆಯ ಮದಿಕೊಪ್ಪ ಗ್ರಾಮದ ಭೀಮಕ್ಕ ಚವ್ಹಾಣ (18) ದೇಶದ ಸೈನ್ಯಕ್ಕೆ ಆಯ್ಕೆಯಾಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕಳೆದ ವರ್ಷ ದೇಶದ ಸೇನೆ ಭರ್ತಿಗೆ ಕರೆದಿದ್ದ ರ‍್ಯಾಲಿಯಲ್ಲಿ ಭೀಮಕ್ಕ ಆಯ್ಕೆಯಾಗಿದ್ದರು. ಮಂಗಳೂರು ನೇಮಕಾತಿ ವಲಯದಲ್ಲಿ 11 ಜಿಲ್ಲೆಗಳಲ್ಲಿ ಏಕೈಕ ಯುವತಿಯಾಗಿ ಆಯ್ಕೆಯಾಗಿದ್ದು ವಿಶೇಷ.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬೀಮಕ್ಕ, ಸೇನೆ ಸೇರುವುದು ನನ್ನ ಕನಸಾಗಿತ್ತು. ಇಂದು ಕನಸು ನನಸಾಗಿದೆ. ನನಗೆ ಈ ಸಾಧನೆ ಮಾಡಲು ಪ್ರೇರಣೆ ನೀಡಿದ ಎಲ್ಲಾ ನನ್ನ ಗುರುವೃಂದದವರಿಗೆ ಧನ್ಯವಾದಗಳು. ಸೇನೆ ಸೇರುತ್ತೇನೆ ಎಂದು ಹೋದಾಗ ಅದಕ್ಕೆ ಪ್ರೋತ್ಸಾಹ ನೀಡಿದ ತಂದೆ ತಾಯಿಗೆ ನನ್ನ ವಂದನೆಗಳು. ಸೇನೆಗೆ ಸೇರಿ ದೇಶಕ್ಕಾಗಿ ಏನಾದರೂ ಸಾಧನೆ ಮಾಡುತ್ತೇನೆ ಎಂದು ಭೀಮಕ್ಕ ಹೇಳಿದ್ದಾರೆ.

ಭೀಮಕ್ಕ ನಗರದ ಕೆಸಿಡಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಓದುತ್ತಿದ್ದು, ಇದರ ನಡುವೆ ಸೇನೆಗೆ ಆಯ್ಕೆಯಾಗಿದ್ದಾರೆ. ಈ ವಿಷಯ ತಿಳಿದ ಗ್ರಾಮದ ಜನರಲ್ಲಿ ಸಂಭ್ರಮ ಮನೆ ಮಾಡಿದ್ದು, ಎಲ್ಲರೂ ಭೀಮಕ್ಕ ಕುಟುಂಬಸ್ಥರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸೇನೆಗೆ ಆಯ್ಕೆಯಾಗಿದ್ದು ಭೀಮಕ್ಕಳ ತಾಯಿಯ ಕಣ್ಣಲ್ಲಿ ಸಂತಸದ ಕಣ್ಣೀರು ತರಿಸಿದೆ. ಸದ್ಯ ಈ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಭೀಮಕ್ಕ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *