ವೃದ್ಧನಿಂದ ಯುವತಿ ಮೇಲೆ ರೇಪ್- ನವಜಾತ ಶಿಶುವನ್ನು ಬೀದಿಗೆ ಬಿಸಾಕಿದ ಪಾಪಿ

– ಈ ಹಿಂದೆಯೂ ಮಗುವೊಂದನ್ನ ಬೀದಿಗೆ ಬಿಟ್ಟಿದ್ದ ನೀಚ!
– ಮಗಳ ಹೆರಿಗೆ ವಿಷಯ ಮುಚ್ಚಿಟ್ಟಿದ್ದ ತಾಯಿಯೂ ಅರೆಸ್ಟ್

ಧಾರವಾಡ: 60 ವರ್ಷದ ವೃದ್ಧ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೇ ಆಕೆಗೆ ಹುಟ್ಟಿದ್ದ ಮಗುವನ್ನ ಬೀದಿಗೆ ಬಿಸಾಕಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಹಿರೇಮಲ್ಲಿಗವಾಡ ಗ್ರಾಮದ ಪೀರಪ್ಪ ಕುಂಬಾರಕೊಪ್ಪ ಅಮಾನವೀಯ ಕೃತ್ಯ ಎಸಗಿದ ಪಾಪಿ. ಅದೇ ಗ್ರಾಮದ ಯುವತಿಯ ಮೇಲೆ ಪೀರಪ್ಪ ನಿರಂತರ ಅತ್ಯಾಚಾರ ಎಸಗಿದ್ದಾನೆ. ಯುವತಿಗೆ ಹುಟ್ಟಿದ ನವಜಾತ ಶಿಶುವನ್ನು ಬೀದಿಗೆ ಬಿಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೀರಪ್ಪ ಯುವತಿಯ ಮೇಲೆ ಸುಮಾರು ವರ್ಷಗಳಿಂದ ಅತ್ಯಾಚಾರ ಎಸಗುತ್ತಾ ಬಂದಿದ್ದ. ಪರಿಣಾಮ ಯುವತಿ 2018ರಲ್ಲಿ ಗರ್ಭಿಣಿಯಾಗಿದ್ದಳು. ಆಸ್ಪತ್ರೆಗೆ ಹೋದರೆ ತನ್ನ ಕೃತ್ಯ ಬಯಲಾಗುತ್ತದೆ ಎಂದು ಅರಿತಿದ್ದ ಪೀರಪ್ಪ ಯುವತಿಯನ್ನು ಎಲ್ಲಿಗೂ ಹೋಗದಂತೆ ಬೆದರಿಸಿದ್ದ. ಯುವತಿ ಕೆಲ ದಿನಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಹೆರಿಗೆಯನ್ನು ಸಂತ್ರಸ್ತೆಯ ತಾಯಿ ಬಸವ್ವ ಗೌಡರ ಮನೆಯಲ್ಲಿ ಮಾಡಿಸಿದ್ದಳು.

ಕ್ರೂರಿ ಪೀರಪ್ಪ ಯುವತಿಯಿಂದ ನವಜಾತ ಶಿಶುವನ್ನು ಕಿತ್ತುಕೊಂಡು ಧಾರವಾಡ ಬೈಪಾಸ್ ರಸ್ತೆ ಪಕ್ಕದಲ್ಲಿ ಇಟ್ಟು ಬಂದಿದ್ದ. ಈ ವಿಚಾರವನ್ನು ಯಾರ ಮುಂದೆಯೂ ಹೇಳದಂತೆ ಸಂತ್ರಸ್ತೆ ಹಾಗೂ ಆಕೆಯ ತಾಯಿ ಬಸವ್ವಳಿಗೆ ಕೊಲೆ ಬೆದರಿಕೆ ಹಾಕಿದ್ದ. ಮಗು ಅಳುತ್ತಿದ್ದ ಧ್ವನಿ ಕೇಳಿ ಸ್ಥಳಕ್ಕೆ ಹೋಗಿ ನೋಡಿದ್ದ ಕೆಲವರು ಶಿಶುವನ್ನು ಎತ್ತಿಕೊಂಡು ಬಂದು ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದರು. ಈ ಹಿಂದೆಯೂ ಅದೇ ಜಾಗದಲ್ಲಿ ಮಗು ಸಿಕ್ಕಿದ್ದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು.

ಈ ಸಂಬಂಧ ಧಾರವಾಡ ಜಿಲ್ಲಾ ಮಹಿಳಾ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದರು. ಸುತ್ತಮುತ್ತಲಿನ ಗ್ರಾಮದ ಆಶಾ ಕಾರ್ಯಕರ್ತೆಯರಿಂದ ಗರ್ಭಿಣಿ ಹಾಗೂ ಬಾಣಂತಿಯರ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಅಷ್ಟೇ ಅಲ್ಲದೆ ಗ್ರಾಮಗಳಿಗೆ ಮಫ್ತಿ ಪೊಲೀಸರನ್ನು ಕಳುಹಿಸಲಾಗಿತ್ತು. ಆಗ ಪೀರಪ್ಪನ ಕೃತ್ಯ ಬಯಲಿಗೆ ಬಂದಿತ್ತು. ತಕ್ಷಣವೇ ಪ್ಲಾನ್ ರೂಪಿಸಿದ ಅಧಿಕಾರಿಗಳು, ಓರ್ವ ಪೊಲೀಸ್ ಪೇದೆ ಹಾಗೂ ಮಹಿಳಾ ಪೇದೆ ಮನೆ ಕೆಲಸ ಮಾಡುವವರಂತೆ ಹಿರೇಮಲ್ಲಿಗವಾಡ ಗ್ರಾಮಕ್ಕೆ ಕಳುಹಿಸಿದ್ದರು. ಅವರ ಮೂಲಕ ಮಾಹಿತಿ ಪಡೆದು, ಆರೋಪಿಗಳನ್ನು ಬಂಧಿಸಿದ್ದಾರೆ.

ಸಂತ್ರಸ್ತ ಯುವತಿಗೆ ಮೂರು ವರ್ಷಗಳ ಹಿಂದೆಯೂ ಒಂದು ಮಗು ಹುಟ್ಟಿತ್ತು. ಅದನ್ನು ಕೂಡ ಪೀರಪ್ಪ ರಸ್ತೆ ಪಕ್ಕಕ್ಕೆ ಇಟ್ಟು ಬಂದಿದ್ದ. ಆ ಮಗು ಈಗ ಬಾಲ ಮಂದಿರದಲ್ಲಿದೆ. ಹೀಗಾಗಿ ಎರಡೂ ಮಕ್ಕಳ ರಕ್ತವನ್ನು ಡಿಎನ್‍ಎಗೆ ಕಳಿಸಲಾಗಿದೆ.

ಆರೋಪಿ ಪೀರಪ್ಪನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷೆಸ್‍ಗಳ ಅಡಿ ಪ್ರಕರಣ ದಾಖಲಾಗಿದೆ. ಜೊತೆಗೆ ಹೆರಿಗೆ ಮಾಡಿಸಿದ ವಿಷಯ ಮುಚ್ಚಿಟ್ಟಿದ್ದಕ್ಕೆ ಯುವತಿಯ ತಾಯಿ ಬಸವ್ವ ಗೌಡರಳನ್ನು ಕೂಡ ಪೊಲೀಸರು ಬಂಧಿಸಿದ್ದು, ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತೆಯು ಮನೆಗೆ ವಾಪಸ್ ಆಗಿದ್ದಾಳೆ.

Comments

Leave a Reply

Your email address will not be published. Required fields are marked *