Dharmasthala | 13 ವರ್ಷದ ಹಿಂದಿನ ಕೇಸ್ ಬಗ್ಗೆ ಮತ್ತೊಂದು ದೂರು – ದೂರುದಾರ ಹೇಳಿದ್ದೇನು?

– ದೂರು ಸ್ವೀಕರಿಸಿ ಎನ್‌ಸಿಆರ್ ನೀಡಿದ ಪೊಲೀಸರು
– ನಾನು ಮೃತದೇಹ ಹೂತಿಲ್ಲ, ಆದರೆ ನೋಡಿದ್ದೇನೆ ಎಂದ ದೂರುದಾರ

ಮಂಗಳೂರು: ಅನಾಮಿಕ ವ್ಯಕ್ತಿ ಕೊಟ್ಟಿರುವ ದೂರಿನಂತೆ 11 ಸ್ಥಳಗಳಲ್ಲಿ ಎಸ್‌ಐಟಿ (SIT) ಶೋಧ ನಡೆಸುತ್ತಿರುವಾಗಲೇ ಈ ಪ್ರಕರಣದಲ್ಲಿ ಮತ್ತೊಬ್ಬ ದೂರುದಾರ ಎಂಟ್ರಿ ಕೊಟ್ಟಿದ್ದಾರೆ. ನಾನು ಮೃತದೇಹ ಹೂತಿಲ್ಲ, ಆದರೆ ನೋಡಿದ್ದೇನೆ. ನನ್ನ ಜೊತೆ ಸಾಕ್ಷಿಗಳು ಇದ್ದಾರೆ ಎಂದು ದೂರುದಾರ ಜಯಂತ್ (Jayanth T) ಹೇಳಿದ್ದಾರೆ.

ಮೂವರು ವ್ಯಕ್ತಿಗಳ ಜೊತೆ ಬೆಳ್ತಂಗಡಿಯ ಎಸ್‌ಐಟಿಗೆ ಆಗಮಿಸಿದ್ದ ತಂಗಪ್ಪನ್ ಜಯಂತ್, 2002-03ರ ಅವಧಿಯಲ್ಲಿ ರಾಜ್ಯ ಹೆದ್ದಾರಿ 37ರ ಅರಣ್ಯದಲ್ಲಿ ಮೃತದೇಹವೊಂದನ್ನು ಎಸೆದು ಹೋಗಲಾಗಿತ್ತು. ಈ ವಿಷಯವನ್ನು ಸ್ಥಳೀಯ ನಿವಾಸಿಯೊಬ್ಬರು ಬೆಳ್ತಂಗಡಿ ಇನ್ಸ್‌ಪೆಕ್ಟರ್‌ಗೆ ತಿಳಿಸಿದ್ದರು. ಘಟನೆ ನಡೆದು ಒಂದು ವಾರದ ನಂತರ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಬಂದಿದ್ದಾರೆ. ಅದು 35 ರಿಂದ 40 ವರ್ಷ ಹೆಂಗಸಿನ ಶವ. ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಿ, 2 ಅಡಿ ಆಳದ ಹೊಂಡ ತೆಗೆದು ಹೂತು ಹಾಕಿದ್ದಾರೆ. ಆದರೆ ಮೃತಪಟ್ಟಿದ್ದವರ ವಯಸ್ಸು ಸುಮಾರು 13 ರಿಂದ 15 ವರ್ಷದ ಹೆಣ್ಣು ಮಗು ಅಂತ ಜಯಂತ್ ದೂರಿದ್ದಾರೆ. ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಸಿಸಿಬಿ ಪೊಲೀಸರಿಂದ ಇನ್ನಿಬ್ಬರು ಅರೆಸ್ಟ್

ಅಲ್ಲದೇ ನಾನು ಮೃತದೇಹ ಹೂತಿಲ್ಲ. ಆದರೆ, ನೋಡಿದ್ದೇನೆ. ನನ್ನ ಜೊತೆ ಸಾಕ್ಷಿಗಳು ಇದ್ದಾರೆ. 15 ವರ್ಷಗಳಿಂದ ಒಬ್ಬ ಒಳ್ಳೆಯ ಅಧಿಕಾರಿಗಾಗಿ ಕಾಯುತ್ತಿದ್ದೆ ಎಂದು ಜಯಂತ್ ಹೇಳಿದ್ದಾರೆ. ಜಯಂತ್ ದೂರಿನ ಅರ್ಜಿಗೆ ಹಿಂಬರಹ ನೀಡಿದ ಎಸ್‌ಐಟಿ, ದೂರನ್ನು ಪರಿಶೀಲಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಸೂಚಿಸಿದೆ. ಎನ್‌ಸಿಆರ್ ನೀಡಿದ ಪೊಲೀಸರು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಕಾಂತಾರದಲ್ಲಿ ಕಾಣಿಸಲಿದ್ದಾರೆ ಸೂಪರ್‌ಸ್ಟಾರ್!

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದೂರುದಾರ ಜಯಂತ್, ಈ ಘಟನೆಗೆ ನಾನೇ ಪ್ರತ್ಯಕ್ಷ ಸಾಕ್ಷಿ. ನನ್ನ ಜೊತೆ ನಾಲ್ಕೈದು ಮಂದಿ ಪ್ರತ್ಯಕ್ಷ ಸಾಕ್ಷಿ ಇದ್ದಾರೆ. ಗೌಪ್ಯತೆ ಕಾಪಾಡೋದಕ್ಕೆ ದೂರು ಅರ್ಜಿಯಲ್ಲಿ ಕೆಲ ಬದಲಾವಣೆ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಈಗಲೂ ಆ ಪೊಲೀಸ್ ವ್ಯಕ್ತಿ ಬದುಕಿದ್ದಾರೆ. ಈ ದೂರಿನ ಬಗ್ಗೆ ಎಫ್‌ಐಆರ್ ದಾಖಲಿಸಿಕೊಳ್ಳಬೇಕು. ಎಸ್‌ಐಟಿ ಸಂಪೂರ್ಣವಾಗಿ ತನಿಖೆ ಮಾಡಬೇಕು. 1986ರಿಂದ ಕರ್ನಾಟಕದಲ್ಲಿ ಒಳ್ಳೆಯ ಪೊಲೀಸರೇ ನನಗೆ ಸಿಗಲಿಲ್ಲ. ಪದ್ಮಲತಾ ಕೊಲೆ ಪ್ರಕರಣದ ತನಿಖೆ ಆಗಬೇಕು. ಚಾರ್ಮಾಡಿಯಲ್ಲಿ ನಡೆದ ಕೊಲೆ ಪ್ರಕರಣವೂ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಿಜವಾದ ಭಾರತೀಯರಾಗಿದ್ದರೆ ಈ ಹೇಳಿಕೆ ನೀಡುತ್ತಿರಲಿಲ್ಲ: ರಾಹುಲ್‌ಗೆ ಸುಪ್ರೀಂ ಛೀಮಾರಿ

ಜಯಂತ್ ಆರೋಪ ಏನು?
*ಅರಣ್ಯ ಪ್ರದೇಶದಲ್ಲಿ ಸಿಕ್ಕ ಮೃತದೇಹದ ಬಗ್ಗೆ ನಿರ್ಲಕ್ಷ್ಯ.
*ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಿಸಿಲ್ಲ
*ಮೃತದೇಹ ಸಿಕ್ಕ ಸ್ಥಳದ ಮಹಜರು ಮಾಡಿಲ್ಲ
*ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿಲ್ಲ
*ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿಲ್ಲ